ಇರುಳು ಕಳೆದು ಕೋಟಿ ಚುಕ್ಕಿಗಳ ಬೆಳಕಿನಿಂದ ಮನೆ ಮನ ಬೆಳಗಿರಲು, ಒಂಟಿತಾರೆ ದಿನಕರನ ಸಾಂಗತ್ಯವೇಕೆ?
ಬರಡು ಭೂಮಿಗೆ ನೀರುಣಿಸಿ ಸಕಲ ಚರಾಚರಕ್ಕೆ ಜೀವಜಲವಾಗಿಹ ತುಂಗೆ ಇರಲು, ತನ್ನೊಡಲಲ್ಲಿ ನೂರು ತುಂಗೆಯಯರನ್ನುಳ್ಳ ಕಡಲ ಹಂಬಲವೇಕೆ?
ಗೋಳಿಮರದಿ ಕೂತ ಪುಟ್ಟ ಮಡಿವಾಳ ಹಕ್ಕಿಯ ಇನಿದನಿ ಇಂಪಾಗಿರೆ, ದೂರದೂರಿನ ಕೋಗಿಲೆಯ ಸ್ವರ ಆಲಿಸುವಾಸೆಯೇಕೆ?
ಮೈಮನಕೆ ಮುದ ನೀಡುವ ಪ್ರೀತಿಯ ಗುಡಿಸಿರಲು ಕಾಣದೂರ ಹಂಗಿನರಮನೆಯ ವೈಭೋಗವೇಕೆ? ಒಡಲಾಳದಲ್ಲಿ ಆರದ ಜ್ಞಾನಜ್ವಾಲೆ ಆವರಿಸಲು ಉಳಿದ ಕಾಮತೃಷೆಯೇಕೆ?
ಮಲೆನಾಡಿನ ಮಗಳಾಗೆ ನಾ ಇರುವೆ, ನನ್ನ ಅಳಿವು ಉಳಿವು ಗೆಲುವು ಸೋಲು, ನೋವು ನಲಿವಿಗೆ ಪಂಚಭೂತಗಳೇ ಸಾಕ್ಷಿಯಾಗಿರಲಿ ಎಲ್ಲಕ್ಕೂ ಅವುಗಳ ನೆರವಿರಲಿ, ನನ್ನಿ ಪರಿಸರ ತೊರೆಯುವ ಮುನ್ನ ನನ್ನ ಈ ಆಕೃತಿ ಪ್ರಕೃತಿಯೊಂದಿಗೆ ಲೀನವಾಗಿರಲಿ
ಮೋಜಿನ ಮಳೆ ನಿಂತು ಆಗಲೇ ನಾಲ್ಕೈದು ದಿನವಾಯ್ತು. ಆದರೆ ಈ ವಾರ ಅಂತಹ ಸಂಭ್ರಮವಿಲ್ಲ. ಮಧ್ಯದಲ್ಲಿ ಯುಗಾದಿ ಹಬ್ಬ , ಹೋಳಿಗೆ ಊಟ ಮೆದ್ದಿದ್ದು ಬಿಟ್ಟರೆ.
ಬಾಕಿಯಂತೆ ಏ.೫ ರಿಂದ ಏ ೧೨ ರ ವರೆಗೂ ಮನಸ್ಸಿಗೆ ಇಬ್ಬರನ್ನು ನೆನೆಯದೇ ಇರಲು ಸಾಧ್ಯವಾಗುವುದಿಲ್ಲ. ನೆಚ್ಚಿನ ಗುರು, ಮಾರ್ಗದರ್ಶಿ ತೇಜಸ್ವಿ , ನಾಡಿನ ಸಾಂಸ್ಕೃತಿಕ ಸಂಕೇತ ಡಾ. ರಾಜ್ ಕುಮಾರ್.
ತೇಜಸ್ವಿ ನಿರುತ್ತರದಲ್ಲಿ ಕವಿದ ಮೋಡ ಚದುರಿ ಮಳೆ ಸುರಿಸಿ, ಹರುಷವನ್ನು ಅರಿಸಿ ಸಾಗುತ್ತಿದೆ. ರಾಜ್ ನೆನಪಿನಲ್ಲಿ ಸ್ಮಾರಕ ಎಂಬ ನೆಪದಲ್ಲಿ ರಾಜ್ ಅವರ ಕನಸುಗಳು ಕಮರುತ್ತಿದೆ. ಈ ಇಬ್ಬರು ಸರಳ ಜೀವಿಗಳು ಇಂದಿನವರ ಜಂಜಾಟವನ್ನು ನೋಡುತ್ತಿದ್ದರೆ ಖಂಡಿತಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದರು ಎನಿಸುತ್ತದೆ.
ಸ್ಮಾರಕ ನಿರ್ಮಾಣ, ಅರ್ಥವಿಲ್ಲದ ಆಚರಣೆಗೆ ತೇಜಸ್ವಿಯಂತೂ ವಿರೋಧಿಸುತ್ತಿದ್ದರು. ರಾಜ್ ಅವರು ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಕೊಂಡು ಬೆಳೆದವರು. ನಗರದಲ್ಲಿದ್ದರೂ ಸದಾ ಹಳ್ಳಿಮನೆಯ ವಾಸ್ತವ್ಯಕ್ಕಾಗಿ ಹಾತೊರೆಯುತ್ತಿದ್ದ ಜೀವ.
ತೇಜಸ್ವಿ ನಿಸರ್ಗದ ರಮಣೀಯತೆಗೆ ಸೋತು, ಪ್ರಕೃತಿಯ ಮಡಿಲಲ್ಲಿ ಸಾಧನೆ, ಸಂಶೋಧನೆ ಮಾಡುತ್ತಾ, ಮುಗ್ಧ ಜನರೊಡನೆ ಬೆರೆತು ಸಾರ್ಥಕ ಬದುಕು ಬಾಳಿದವರು. ಈ ಎರಡು ಚೇತನಗಳಲ್ಲಿ ನಾನು ಇಷ್ಟಪಡುವುದು ಸರಳತೆ ಹಾಗೂ ಜೀವನ ಪ್ರೀತಿ, ಉತ್ಸಾಹ.
ಇವರಿಬ್ಬರ ಚಿಂತನೆಗಳು ಸ್ಮಾರಕಕ್ಕೆ ಸೀಮಿತವಾಗದೇ ಅವರ ಸಾಧನೆ, ಜೀವನ ಪ್ರೀತಿ ಎಲ್ಲರಲ್ಲೂ ಆಸುಹೊಕ್ಕದರೆ ಎಷ್ಟು ಸುಂದರ. ಅದ್ಭುತ ಮಾಯಾಲೋಕದ ಕನಸು ಕಣ್ಮುಂದೆ ಕಾಣಿಸುತ್ತಿದೆ. ವಿರಮಿಸುತ್ತೇನೆ ಸದ್ಯಕ್ಕೆ.
ಮಳೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ಮಳೆ ಬಗ್ಗೆ ನೂರಾರು ಕವಿಗಳು, ಸಾಹಿತಿಗಳು, ಸಾವಿರಾರು ಲೇಖನಗಳನ್ನು ಬರೆದಿರಬಹುದು. ಆದರೆ ಕಲ್ಪನೆಯ ಚಿತ್ರಣವೆ ಬೇರೆ ವಾಸ್ತವದ ಅನುಭವವೇ ಬೇರೆ.
ಋತುಮಾನದ ಏರುಪೇರು ಜನರ ಜೀವನದಲ್ಲಿ ಅನೇಕ ತಿರುವುಗಳನ್ನು ತರುವುದನ್ನು ಕಂಡಿದ್ದೇನೆ. ಅಕಾಲಿಕ ಮಳೆಯಿಂದ ಮನೆಹಾನಿ, ಬೆಳೆಹಾನಿ ಮಾಮೂಲಾಗಿ ಹೋಗಿದೆ.
ಬೆಳೆದು ನಿಂತ ಫಸಲು ಭೂಮಿ ಪಾಲಾದಾಗ, ಒಬ್ಬ ತಂದೆಗೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ದುಃಖದಂತೆ ನಿರಂತರವಾದ ನೋವನ್ನು ನೀಡುತ್ತದೆ.
ಇದಕ್ಕೆ ಪರಿಹಾರ? ಸರ್ಕಾರ ಕೊಡುವ ಕನ್ನಡಿಯೊಳಗಿನ ಗಂಟನ್ನು ನೆಚ್ಚಿಕೊಂಡರೆ ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಮನಬಂದಂತೆ ಬದಲಾಗುವ ಪ್ರಕೃತಿಗೆ ಹೊಂದಿಕೊಳ್ಳುವುದೇ ಸರಿ. ಬಿತ್ತನೆಯಿಂದ ಹಿಡಿದು ಫಸಲು ಬರುವ ತನಕ ಈಗಿನ ಋತುಮಾನಕ್ಕಿಂತ ಕೊಂಚ ಮುಂಚಿತವಾಗಿ ಎಲ್ಲಾ ಕೆಲಸವನ್ನು ಪ್ರಾರಂಭ ಮಾಡಿದರೆ ಒಳಿತೆನಿಸುತ್ತದೆ.
ನಮ್ಮ ಬೇಸಾಯ ಪದ್ಧತಿಯನ್ನು ಈ ತಿಕ್ಕಲು ಮಳೆಗೆ ಹೊಂದಿಸಿಕೊಂಡು ಅದರೊಡನೆ ಆಟವಾಡುವ ಆಸೆಯಾದರೂ, ಅಂದುಕೊಂಡಿದ್ದು ಘಟಿಸದಿರೆ, ಚಿಂತನೆಗೆ ಫಲವಿಲ್ಲ ಎಂಬ ಭಯ ಕಾಡುತ್ತದೆ.
ಆದರೆ ನಮ್ಮ ಹವಾಮಾನ ಇಲಾಖೆ ಕೊಂಚ ಶ್ರಮವಹಿಸಿ ಮಣ್ಣ ಮಕ್ಕಳಿಗೆ ಸರಿಯಾದ ಮುನ್ಸೂಚನೆ ನೀಡಿದರೆ ಸಾಕು. ರೇಡಿಯೊಗೆ ಕಿವಿ ಆನಿಸಿಕೊಂಡು ಹವಾಮಾನ ವರದಿ ಕೇಳುತ್ತಿದ್ದದ್ದು ನೆನಪಾಗುತ್ತದೆ.
ಅದು ಹಾಗಿರಲಿ, ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಊರೆಂಬ ನಾಲ್ಕು ಮನೆಗಳ ಸಂಸಾರ ವರ್ಷಗಳು ಉರುಳುವುದರಲ್ಲಿ ಇಲ್ಲವಾಗಿ ಹರಿದು ಹಂಚಿಹೋಗುತ್ತದೆ. ಇದನ್ನೆಲ್ಲಾ ನೆನೆದಾಗ ನೋವಾಗುತ್ತದೆ.
ಹೊರಗಡೆಯಿಂದ ಅಪ್ಪ ಮನೆಗೆ ಬಂದು'ಇವತ್ತು ಕುಂಚೆಬೈಲು ಭಟ್ಟರ ಮನೆ ಆಕಳು ಮಳೆ ಹೊಡೆತಕ್ಕೆ ಸಿಕ್ಕಿತಂತೆ, ಗೌಡ್ರ ಆಳು ಲಕ್ಕ ಸಂಸಾರ ಸಮೇತ ಗುಳೆ ಹೊರಟಿದೆಯಂತೆ' ಎಂದೆಲ್ಲಾ ಹೇಳುವಾಗ ಮನದಿ ಮೂಡುವ ಮೊದಲ ಪ್ರಶ್ನೆ ನಮ್ಮ ಸರದಿ ಯಾವಾಗ? ನೆನೆದರೆ ಮೈ ಜುಂ ಎನ್ನುತ್ತದೆ.
ಚಿಕ್ಕಂದಿನಿಂದ ಆಡಿ ಬೆಳೆದ ಮನೆಯನ್ನು ತೊರೆಯುವುದೂ ಒಂದೇ. ಶಾಂತವಾದ ತುಂಗೆಯ ಪ್ರವಾಹಕ್ಕೆ ತಲೆ ಒಡ್ಡುವುದೂ ಒಂದೇ. ಇದನ್ನೆಲ್ಲಾ ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ.
ಹೌದು, ಬೇಸಿಗೆ ಒಂದು ರೀತಿ ಸಂಭ್ರಮಕ್ಕೆ ನೂರಾರು ರೀತಿ ಹೇಳಿಕೆಗೆ, ಊಟದ ಮನೆಗಳಿಗೆ ತಿರುಗುವ ಕಾಲ. ಈಗಿನ್ನೂ ಶಿಶಿರ ಕಳೆದಿಲ್ಲ. ಸಂಭ್ರಮಕ್ಕೆ ತೆರೆ ಎಳೆದಂತೆ ಆಗಲೇ ಮಳೆರಾಯ ಮನೆಗೆ ಬಂದು ಕುಳಿತರೇ, ಬೇಡದ ಅತಿಥಿಯನ್ನು ಯಾರು ತಾನೇ ಶಪಿಸುವುದಿಲ್ಲ ಹೇಳಿ.
ಆದರೆ ದೂರದ ನಗರವಾಸಿಗಳು ಎಲ್ಲಾ ಸೌಲಭ್ಯಗಳಿದ್ದು, ಎಂದೋ ಸುರಿವ ಎರಡು ಮೂರು ದಿನಗಳ ಮಳೆಗೆ ಬೆಚ್ಚಿ ವರ್ಣಿಸುವ ರೀತಿ ಅಸಹನೀಯವೆನಿಸುತ್ತದೆ.(ಇತ್ತೀಚೆಗೆ ರಾಜಧಾನಿಯಿಂದ ಶಂಕರನ ಪಟಾಲಂ ಬಂದಿದ್ದಾಗ ಮಳೆಯನ್ನು ಅವರ ಜೀವನದ ವಿಲನ್ ರೀತಿಯಲ್ಲಿ ಚಿತ್ರಿಸುತ್ತಿದ್ದನ್ನು ಕಂಡು ಹೇಳಿದೆ ಅಷ್ಟೆ)
ಮಳೆಯಲ್ಲಿ ನೆಂದು, ತೊಯ್ದು ಕನಿಷ್ಠ ಅನುಭವವಿಲ್ಲದ ಜನ ಮಳೆಬಗ್ಗೆ ಉಪನ್ಯಾಸ ನೀಡುವಾಗ ರೇಜಿಗೆ ಎನಿಸುತ್ತದೆ. ಪ್ರಕೃತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಬೇರೆ. ಪ್ರಕೃತಿಯ ವೈಪರೀತ್ಯ ಎದುರಿಸಿ ಅದನ್ನು ಮೆಟ್ಟಿ ನಿಲ್ಲುವುದು ಬೇರೆ.
ಈ ವಿಷಯದಲ್ಲಿ ನಾ.ಡಿಸೋಜರ ಪಾತ್ರಧಾರಿ ನಾಗಿ(ದ್ವೀಪ ಚಿತ್ರದಲ್ಲಿ) ಗುರುವೇ ಸರಿ. ಸಂಕಲ್ಪ ಸ್ಥಿರವಾಗಿದ್ದರೆ ಪ್ರಕೃತಿ ನಮ್ಮ ಕೈಹಿಡಿತದಲ್ಲಿರುತ್ತದೆ. ಪರಿಸರದೊಡನೆ ಬೆರೆತು ನಮ್ಮ ಆಣತಿಯಂತೆ ಅದನ್ನು ರೂಪಿಸಿಕೊಳ್ಳುವ ಜಾಣ್ಮೆ ಅರಿತರೇ ಬದುಕಲ್ಲಿ ಯಾವುದೂ ಅನಿಷ್ಟವಲ್ಲ, ಅಕಾಲಿಕ ಕಷ್ಟವಲ್ಲ.
ಮತ್ತೊಮ್ಮೆ ಮಳೆ ಬಂದಾಗ ಮನಸೋ ಇಚ್ಛೆ ನೆನೆದು ನೋಡಿ ಅದರ ಮಜಾನೇ ಬೇರೆ, ಆಗ ತಿಳಿಯುತ್ತೆ ಅದರ ಗಮ್ಮತ್ತು. (ಜ್ವರ ಬಂತೆಂದು ಬೈಯಬೇಡಿ ಮತ್ತೆ) ನಾನಂತೂ ಪೆನ್ನು ಕೆಳಗಿಟ್ಟು ಅಂಗಳಕ್ಕೆ ಇಳಿಯುತ್ತಿದ್ದೇನೆ. ಮಳೆ ನಿಲ್ಲುವವರೆಗೂ ನಿರಂತರ ಮೋಜಿನಾಟ.....
"ಮಳೆ ಎಂದರೆ ಹಾಗೆ. ಮನಸ್ಸಿನಲ್ಲಿ ನೂರಾರು ಭಾವನೆಗಳ ಲಹರಿಯನ್ನು ತರುತ್ತದೆ. ಬಹುದಿನ ಕಾಲ ನನ್ನ ಬರವಣಿಗೆಗೆ ಬ್ರೇಕ್ ಹಾಕಿದ್ದು, ಪುನಃ ಬರೆಯಲು ಪ್ರೇರಣೆ ನೀಡುತ್ತಿರುವುದು ಈ ಮಳೆಯೇ"
"ಥೂ ಅನಿಷ್ಟ.. ಎಲ್ಲೇ ಹೋದರೂ ಹಾಳಾದ್ದು.. ಇದು ನನ್ನ ಬಿಡೋ ಹಾಗೆ ಕಾಣೋದಿಲ್ಲ. ಏನು ಪಿರಿಪಿರಿಯಪ್ಪಾ ಇದರದ್ದು" ಎಂದು ಬೆನ್ನಿಗಂಟಿದ್ದ ಮಕ್ಕಳನ್ನು ಗದುರುವಂತೆ ಗದರುತ್ತಾ ಕೊಡೆ ಮಡಚಿ ಒಳ ಬಂದ ನಂತರವೂ ಅವನ ಮಾತು ಮುಂದುವರೆದಿತ್ತು. ಇಲ್ಲದವರಿಗೆ ಅಭಾವ ವೈರಾಗ್ಯ, ಇದು ಒಂಥರಾ ಅಗಾಧ ವೈರಾಗ್ಯ" ಎನ್ನುತ್ತಾ ತಲೆ ಕೊಡವುತ್ತಾ ಅಜ್ಜನ ರೀತಿ ಕೂತ.
ಹೊಸಬರೂ ಯಾರೋ ಬಂದ್ರು ಈ ಮಳೇಲಿ ಎಂದುಕೊಳ್ಳುತ್ತಾ ನಾನು ಪಡಸಾಲೆಗೆ ಬಂದು ನೋಡಿದೆ. ಶಂಕರನ ಸ್ಥಿತಿ ಕಂಡು ನಗುತ್ತಾ ಹೇಳಿದೆ
"ಬೇಜಾರಂತೆ ಬೇಜಾರು, ಬೆಂಗ್ಳೂರು ಬಿಟ್ಟಾಗ ಶುರುವಾಗಿದ್ದು. ಇಲ್ಲಿಗೆ ಬಂದು ಎರಡು ದಿನ ಆಯ್ತು ಇನ್ನು ನಿಂತಿಲ್ಲ. ನಿಲ್ಲೋ ಹಾಂಗೂ ಕಾಣಲ್ಲ ಬಿಡು. ನಾನು ಎಷ್ಟು ಮಳೆ ನೋಡಿಲ್ಲ. ಇದು ಯಾಕೋ ಸರಿಯಿಲ್ಲ. ಅಪ್ಪಯ್ಯ ಹೇಳ್ತಿದ್ದ ಈ ಅಕಾಲದ ಮಳೆ ನಮ್ಮನ್ನು ಹಾಳು ಮಾಡೋಕೆ ಬಂದಂತಿದೆ ಅಂತಾ"
ಅವನ ಧಾಟಿ ನೋಡಿದರೆ ೮೦ರ ಹರೆಯದ ನಮ್ಮಜ್ಜ ಮೈ ಮೇಲೆ ಬಂದಂತೆ ಕಾಣುತ್ತಿತ್ತು. ಅವನ ಬೆಂಗ್ಳೂರಿನ ಗೆಳೆಯರು ಮಳೆಯ ಬಗ್ಗೆ ದೂರುವ ಮಾತನ್ನು ಎಂದೂ ಆಡುತ್ತಿದ್ದ. ಆಗೆಲ್ಲಾ ಸುಮ್ಮನಿದ್ದೆ ಇವತ್ತು ಅವನನ್ನು ಕಿಚಾಯಿಸಲು ನಿರ್ಧರಿಸಿ ಹೇಳಿದೆ.
"ಅಕಾಲದ ಮಳೆ ನಿಜ ಆದರೆ ಹಾಳು ಮಾಡೋಕೆ ಅನ್ನೊದ್ದನ್ನಾ ನಾ ಒಪ್ಪಲ್ಲಬಿಡು" ಎಂದೆ..
ನನ್ನ ಉತ್ತರದಿಂದ ಸಂತುಷ್ಟಗೊಳ್ಳದೆ ಮುಂದುವರೆಸಿದ...
'ನೀನು ಬಿಡಕ್ಕ, ಯಾವಾಗಲೂ ಮಳೆ ಪರನೇ ದ್ವೀಪ ಫಿಲ್ಮಂ ನಲ್ಲಿನ ನಾಗಿ ಇದ್ದಂಗೆ, ಸದ್ಯಕ್ಕೆ ನಮ್ಮೂರಿಗೆ ನದಿ ಅಷ್ಟು ಹತ್ರಿಲ್ಲ ಪುಣ್ಯಕ್ಕೆ. ಕಡೆಗೆ ಎಲ್ಲಾ ನಮ್ಮ ಭೂತನಾಥನ ದಯೆ ಅನ್ನೋಕು ಯಾರಿಲ್ಲ ಎಂದು ಬದಲಿಗೆ' ನನ್ನೇ ಗೇಲಿ ಮಾಡತೊಡಗಿದ.
'ಹಾಂಗಲ್ಲ ನಾ ಹೇಳೋದು ಇಲ್ಲಿ ಕೇಳು ಮಳೆ ಬರುತ್ತೆ. ಹೋಗುತ್ತೆ. ಅದನ್ನು ಈಗ ಬಾ ಆಗ ಬಾ ಅಂತಾ ಹೇಳಿಕೆ ಕೊಟ್ಟು ಕರೀಲಿಕ್ಕೆ ಬರುತ್ತಾ ಹೇಳು. ಬಂದಾಗ ಅನುಭವಿಸಬೇಕು. ಎಲ್ಲಾ ಸರ್ತಿ ಮಳೆಯಿಂದ ಶುಭಾನೇ ಆಗುತ್ತೆ ಅಂದ್ರೆ ಹೇಗೆ, ಅಶುಭನೂ ಆಗುತ್ತೆ. ಅದಕ್ಕೆ ತಯಾರಿರಬೇಕು ಜೀವ. ಕಷ್ಟ, ಸಾವು ನೋವು ಹೇಗೆ ಹೇಳಿಕೇಳಿ ಬರೋದಿಲ್ಲ್ವೋ ಹಾಗೆ. ಅವು ಬರೋ ಸಮಯಕ್ಕೆ ನಾವು ತಯಾರಿರಬೇಕು ಅಷ್ಟೆ. ಎಷ್ಟು ಚೆಂದ ಉಂಟು ಮಳೆ. ಅದರ ರುಚಿನಾ ಆಸ್ವಾದಿಸಬೇಕು' ಅಂದೆ. ಜೋರಾಗಿ ನಗಾಡುತ್ತಾ...
'ಹಹ್ಹಹ್ಹಹ್ಹ. ರುಚಿ ಏನು ಬಂತು ಅಮಟೇ ಕಾಯಿ ತೊಟ್ಟು....ಮಳೆಯಿಂದ ಎಷ್ಟು ಊಟದ ಮನೆ ತಪ್ಪೋತು ಗೊತ್ತಾ' ಎಂದು ಮುಖ ಸಪ್ಪಗೆ ಮಾಡಿಕೊಂಡ.
ಹೋ.. ಹಾಗೇಳು ಮತ್ತೆ. ಛೆ ಪಾಪಾ. ಸರಿ ರುಚಿ ರುಚಿಯಾಗಿ ನಿಂಗೆ ಬೇಕಾದ್ದು ಮಾಡಿ ನಿನ್ನ ಹೊಟ್ಟೇನೇನೋ ತಂಪಾಗಿಸಬಹುದಪ್ಪಾ. ಆದ್ರೆ ನಿನ್ನ ಕಣ್ಣು ತಂಪಾಗಿಸೋಕೆ ಇಲ್ಲಿ ಯಾರನ್ನು ಕರೆತರೋದು ಗೊತ್ತಾಗುತ್ತಿಲ್ಲಪ್ಪ' ಎಂದು ನಕ್ಕೆ.
ಹೇ.. ನೀನೊಂದು... ಯಾವಾಗಲೂ ಕುಶಾಲು ನಿಂಗೆ.. ನಿಂಗೆ ಹಿರಿಯಪ್ಪ ರಚಿತ ಅಂತಾ ಹೆಸರಿಡೋ ಬದಲು ಕುಶಾಲಿ ಅಂಥಾ ಹೆಸರಿಡಬೇಕಿತ್ತು. ನಿಂಗೆ ಬೇಜಾರೇ ಆಗೋದಿಲ್ಲ ಕಾಣ್ದದೆ.
ಹ್ಞು...ಕಣಪ್ಪಾ ಹೆಸರು ಬದಲಿಸಿಬಿಡುವಾ ಬಿಡು..ತಡಿ ಬಂದೆ ಎಂದೇಳಿ ಒಳಹೋಗಿ...ಬಿಸಿಬಿಸಿ ಕಾಫಿ ತಂದು ಅವನ ಕೈಗಿತ್ತೆ.
'ಅವನ ಜತೆ ಅವನ ತಂಗಿ ಸುರಜಾ ಇದ್ದಳು. ಊರಿಗೆ ಇವತ್ತೆ ಬಂದಿದ್ದು..ಮಳೆಯಿಂದ ಎಲ್ಲಿಗೂ ಕಾಲು ಬೆಳಸಲಿಲ್ಲ ಅಂಥಾ ಪೇಚಾಡುತ್ತಿದ್ದಳು ಪಾಪಾ
'ಹೌದಾ...ಏನಂದ್ಳು 'ಎಂದವನು ನಾಲಿಗೆ ಕಚ್ಚಿಕೊಂಡ...ಕುಡಿಯುತ್ತಿದ್ದ ಕಾಫಿ ಅನ್ನು ಚೆಲ್ಲಿಕೊಳ್ಳುತ್ತಾ...
ನನ್ನ ನಗು ಹೆಚ್ಚಾಯಿತು..
'ಸರಿ ಮಾರಾಯ್ತಿ ಇಲ್ಲೆ ಇದ್ದರೇ ಕಿಚಾಯಿಸ್ತಾನೇ ಇರುತ್ತೀಯಾ. ನಾನು ತೋಟಕ್ಕೆ ಕಡೆ ಹೋಗ್ತೀನಿ. ಹಿರಿಯಪ್ಪ ಸಿಗಬಹುದು ಅಲ್ಲಿ ಎಂದು ಎದ್ದು ನಿಂತ. ಕುಡಿದ ಕಾಫಿ ಲೋಟ ಬದಿಗಿಟ್ಟು.ಅಂಗಳಕ್ಕೆ ಜಿಗಿದ ನಡೆದ.
ಅವನು ಕೊಡೆ ಬಿಡಿಸಿ ಅಂಗಳಕ್ಕೆ ಹಾರಿದ ಅವನಿಗೆ ಹಳ್ಳದ ನೀರು ಹೆಚ್ಚಾಗಿದೆಯಂತೆ.. ಹುಷಾರು ಎನ್ನುತ್ತಾ...ಅವನು ನಡೆದ ಹಾದಿ ನೋಡುತ್ತಾ ನೆನಪಿನಾಳಕ್ಕೆ ಇಳಿದೆ......