page1

Pages

Thursday, April 3, 2008

ಮಳೆ ನಿಲ್ಲದೇ ಮನದಿ ನೂರಾರು ಲಹರಿ ಮೂಡಿಸಿದೆ ..

ಮುನಿಸು ತರವೇ ಮಳೆಯ ಮೇಲೆ?... ಮುಂದುವರೆದು..

ಮಳೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ಮಳೆ ಬಗ್ಗೆ ನೂರಾರು ಕವಿಗಳು, ಸಾಹಿತಿಗಳು, ಸಾವಿರಾರು ಲೇಖನಗಳನ್ನು ಬರೆದಿರಬಹುದು.
ಆದರೆ ಕಲ್ಪನೆಯ ಚಿತ್ರಣವೆ ಬೇರೆ ವಾಸ್ತವದ ಅನುಭವವೇ ಬೇರೆ.

ಋತುಮಾನದ ಏರುಪೇರು ಜನರ ಜೀವನದಲ್ಲಿ ಅನೇಕ ತಿರುವುಗಳನ್ನು ತರುವುದನ್ನು ಕಂಡಿದ್ದೇನೆ. ಅಕಾಲಿಕ ಮಳೆಯಿಂದ ಮನೆಹಾನಿ, ಬೆಳೆಹಾನಿ ಮಾಮೂಲಾಗಿ ಹೋಗಿದೆ.

ಬೆಳೆದು ನಿಂತ ಫಸಲು ಭೂಮಿ ಪಾಲಾದಾಗ, ಒಬ್ಬ ತಂದೆಗೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ದುಃಖದಂತೆ ನಿರಂತರವಾದ ನೋವನ್ನು ನೀಡುತ್ತದೆ.

ಇದಕ್ಕೆ ಪರಿಹಾರ? ಸರ್ಕಾರ ಕೊಡುವ ಕನ್ನಡಿಯೊಳಗಿನ ಗಂಟನ್ನು ನೆಚ್ಚಿಕೊಂಡರೆ ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಮನಬಂದಂತೆ ಬದಲಾಗುವ ಪ್ರಕೃತಿಗೆ ಹೊಂದಿಕೊಳ್ಳುವುದೇ ಸರಿ. ಬಿತ್ತನೆಯಿಂದ ಹಿಡಿದು ಫಸಲು ಬರುವ ತನಕ ಈಗಿನ ಋತುಮಾನಕ್ಕಿಂತ ಕೊಂಚ ಮುಂಚಿತವಾಗಿ ಎಲ್ಲಾ ಕೆಲಸವನ್ನು ಪ್ರಾರಂಭ ಮಾಡಿದರೆ ಒಳಿತೆನಿಸುತ್ತದೆ.

ನಮ್ಮ ಬೇಸಾಯ ಪದ್ಧತಿಯನ್ನು ಈ ತಿಕ್ಕಲು ಮಳೆಗೆ ಹೊಂದಿಸಿಕೊಂಡು ಅದರೊಡನೆ ಆಟವಾಡುವ ಆಸೆಯಾದರೂ, ಅಂದುಕೊಂಡಿದ್ದು ಘಟಿಸದಿರೆ, ಚಿಂತನೆಗೆ ಫಲವಿಲ್ಲ ಎಂಬ ಭಯ ಕಾಡುತ್ತದೆ.

ಆದರೆ ನಮ್ಮ ಹವಾಮಾನ ಇಲಾಖೆ ಕೊಂಚ ಶ್ರಮವಹಿಸಿ ಮಣ್ಣ ಮಕ್ಕಳಿಗೆ ಸರಿಯಾದ ಮುನ್ಸೂಚನೆ ನೀಡಿದರೆ ಸಾಕು. ರೇಡಿಯೊಗೆ ಕಿವಿ ಆನಿಸಿಕೊಂಡು ಹವಾಮಾನ ವರದಿ ಕೇಳುತ್ತಿದ್ದದ್ದು ನೆನಪಾಗುತ್ತದೆ.

ಅದು ಹಾಗಿರಲಿ, ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಊರೆಂಬ ನಾಲ್ಕು ಮನೆಗಳ ಸಂಸಾರ ವರ್ಷಗಳು ಉರುಳುವುದರಲ್ಲಿ ಇಲ್ಲವಾಗಿ ಹರಿದು ಹಂಚಿಹೋಗುತ್ತದೆ. ಇದನ್ನೆಲ್ಲಾ ನೆನೆದಾಗ ನೋವಾಗುತ್ತದೆ.

ಹೊರಗಡೆಯಿಂದ ಅಪ್ಪ ಮನೆಗೆ ಬಂದು'ಇವತ್ತು ಕುಂಚೆಬೈಲು ಭಟ್ಟರ ಮನೆ ಆಕಳು ಮಳೆ ಹೊಡೆತಕ್ಕೆ ಸಿಕ್ಕಿತಂತೆ, ಗೌಡ್ರ ಆಳು ಲಕ್ಕ ಸಂಸಾರ ಸಮೇತ ಗುಳೆ ಹೊರಟಿದೆಯಂತೆ' ಎಂದೆಲ್ಲಾ ಹೇಳುವಾಗ ಮನದಿ ಮೂಡುವ ಮೊದಲ ಪ್ರಶ್ನೆ ನಮ್ಮ ಸರದಿ ಯಾವಾಗ? ನೆನೆದರೆ ಮೈ ಜುಂ ಎನ್ನುತ್ತದೆ.

ಚಿಕ್ಕಂದಿನಿಂದ ಆಡಿ ಬೆಳೆದ ಮನೆಯನ್ನು ತೊರೆಯುವುದೂ ಒಂದೇ. ಶಾಂತವಾದ ತುಂಗೆಯ ಪ್ರವಾಹಕ್ಕೆ ತಲೆ ಒಡ್ಡುವುದೂ ಒಂದೇ. ಇದನ್ನೆಲ್ಲಾ ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ.

ಹೌದು, ಬೇಸಿಗೆ ಒಂದು ರೀತಿ ಸಂಭ್ರಮಕ್ಕೆ ನೂರಾರು ರೀತಿ ಹೇಳಿಕೆಗೆ, ಊಟದ ಮನೆಗಳಿಗೆ ತಿರುಗುವ ಕಾಲ. ಈಗಿನ್ನೂ ಶಿಶಿರ ಕಳೆದಿಲ್ಲ. ಸಂಭ್ರಮಕ್ಕೆ ತೆರೆ ಎಳೆದಂತೆ ಆಗಲೇ ಮಳೆರಾಯ ಮನೆಗೆ ಬಂದು ಕುಳಿತರೇ, ಬೇಡದ ಅತಿಥಿಯನ್ನು ಯಾರು ತಾನೇ ಶಪಿಸುವುದಿಲ್ಲ ಹೇಳಿ.

ಆದರೆ ದೂರದ ನಗರವಾಸಿಗಳು ಎಲ್ಲಾ ಸೌಲಭ್ಯಗಳಿದ್ದು, ಎಂದೋ ಸುರಿವ ಎರಡು ಮೂರು ದಿನಗಳ ಮಳೆಗೆ ಬೆಚ್ಚಿ ವರ್ಣಿಸುವ ರೀತಿ ಅಸಹನೀಯವೆನಿಸುತ್ತದೆ.(ಇತ್ತೀಚೆಗೆ ರಾಜಧಾನಿಯಿಂದ ಶಂಕರನ ಪಟಾಲಂ ಬಂದಿದ್ದಾಗ ಮಳೆಯನ್ನು ಅವರ ಜೀವನದ ವಿಲನ್ ರೀತಿಯಲ್ಲಿ ಚಿತ್ರಿಸುತ್ತಿದ್ದನ್ನು ಕಂಡು ಹೇಳಿದೆ ಅಷ್ಟೆ)

ಮಳೆಯಲ್ಲಿ ನೆಂದು, ತೊಯ್ದು ಕನಿಷ್ಠ ಅನುಭವವಿಲ್ಲದ ಜನ ಮಳೆಬಗ್ಗೆ ಉಪನ್ಯಾಸ ನೀಡುವಾಗ ರೇಜಿಗೆ ಎನಿಸುತ್ತದೆ. ಪ್ರಕೃತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಬೇರೆ. ಪ್ರಕೃತಿಯ ವೈಪರೀತ್ಯ ಎದುರಿಸಿ ಅದನ್ನು ಮೆಟ್ಟಿ ನಿಲ್ಲುವುದು ಬೇರೆ.

ಈ ವಿಷಯದಲ್ಲಿ ನಾ.ಡಿಸೋಜರ ಪಾತ್ರಧಾರಿ ನಾಗಿ(ದ್ವೀಪ ಚಿತ್ರದಲ್ಲಿ) ಗುರುವೇ ಸರಿ. ಸಂಕಲ್ಪ ಸ್ಥಿರವಾಗಿದ್ದರೆ ಪ್ರಕೃತಿ ನಮ್ಮ ಕೈಹಿಡಿತದಲ್ಲಿರುತ್ತದೆ. ಪರಿಸರದೊಡನೆ ಬೆರೆತು ನಮ್ಮ ಆಣತಿಯಂತೆ ಅದನ್ನು ರೂಪಿಸಿಕೊಳ್ಳುವ ಜಾಣ್ಮೆ ಅರಿತರೇ ಬದುಕಲ್ಲಿ ಯಾವುದೂ ಅನಿಷ್ಟವಲ್ಲ, ಅಕಾಲಿಕ ಕಷ್ಟವಲ್ಲ.

ಮತ್ತೊಮ್ಮೆ ಮಳೆ ಬಂದಾಗ ಮನಸೋ ಇಚ್ಛೆ ನೆನೆದು ನೋಡಿ ಅದರ ಮಜಾನೇ ಬೇರೆ, ಆಗ ತಿಳಿಯುತ್ತೆ ಅದರ ಗಮ್ಮತ್ತು. (ಜ್ವರ ಬಂತೆಂದು ಬೈಯಬೇಡಿ ಮತ್ತೆ) ನಾನಂತೂ ಪೆನ್ನು ಕೆಳಗಿಟ್ಟು ಅಂಗಳಕ್ಕೆ ಇಳಿಯುತ್ತಿದ್ದೇನೆ. ಮಳೆ ನಿಲ್ಲುವವರೆಗೂ ನಿರಂತರ ಮೋಜಿನಾಟ.....

1 comment:

Savi-Ruchi said...

nanage eegale hari malenadige barabeku anistha ide, astu khushi aithu nimma lekhana nodi..
tumbane chennagide.