page1

Pages

Monday, December 31, 2007

ಹೊಸ ವರ್ಷದ ಬಂದಿದೆ ಮತ್ತೆ


ನಾಳೆ ಹೊಸವರ್ಷ ಕಣೇ, ಬೇಜಾನ್ ಪ್ರಿಪರೇಷನ್ ಮಾಡ್ಕೋಬೇಕು, ನೀನು ಬರ್ತೀಯಾ ತಾನೇ? ಹೀಗೆ ಒಂದು ಸಮನೆ ಸಾಗಿತ್ತು ಅವಳ ಲಹರಿ. ಹ್ಞು... ನೋಡೋಣ ಎಂದು ಫೋನಿಟ್ಟೆ. ನಂತರ ಯೋಚಿಸತೊಡಗಿದೆ ಏನಾಗಿದೆ ಇವಳಿಗೆ ಮೊದಲೆಲ್ಲಾ ಹೀಗಿರಲಿಲ್ಲ., ಸಿಟಿ ಗಾಳಿ ಸೋಕಿದ ಮೇಲೆ ಎಂಥಾಯ್ತೋ ಏನೋ ಕಾಣೆ.

ನಮ್ ಜನನೂ ವಿಚಿತ್ರ ಬಿಡಿ. ಹೊಸ ವರ್ಷ ಅಂಥಾ ಏಂತಿಕ್ಕೆ ಆಚರಿಸುತ್ತಾರೋ ಗೊತ್ತಿಲ್ಲ. ನಾಳೆ ಏನು ಋತು ಬದಲಾಗಲ್ಲ. ಚಳಿ ಕಮ್ಮಿಯಾಗಲ್ಲ, ಬಿಸಿಲು ತಂಪಾಗಲ್ಲ, ಕೋಗಿಲೆ ಏನೂ ಸಪ್ತಸ್ವರ ಹೊರಡಿಸೋಲ್ಲ, ಮನುಷ್ಯ ಅಂತೂ ಬದಲಾಗಲ್ಲ. (ಉದ್ದುದದ ಬದಲಾವಣೆ ಪಟ್ಟಿ ತಯಾರಿಸಿಟ್ಟಿಕೊಂಡರೂ) ಏನಿಲ್ಲ ಮತ್ತೆ ಯಾತರದ್ದು ಈ ಹೊಸ ವರ್ಷ ಬರೀದೆ ಕ್ಯಾಲೆಂಡರ್ ಅಂಕಿ ಬದಲಾಗೊದಕ್ಕೆ ಇಷ್ಟೊಂದು ಸಂಭ್ರಮನಾ, ಮೂರ್ಖತನದ ಪರಮಾವಧಿ ಅನಿಸಿತು ನಂಗೆ.

ಊರಲ್ಲಿ ಇದ್ದಿದ್ದರೆ ಈ ಪರಿ ಯೋಚನೆ ಬರೋ ಮಾತೇ ಇಲ್ಲ. ಯಾಕೆಂದರೆ ಅಲ್ಲಿ ಈ ಪರಿ ಹುಚ್ಚಾಪಟ್ಟೆ ಸಂಭ್ರಮದ ಹೊಸ ವರ್ಷವಂತೂ ಕಾಣೆ.

ನಾನು ಈ ಬ್ಲಾಗಿನ ಹೊಟ್ಟೆಗೆ ಅಕ್ಷರ ತುಂಬಿಸದೆ ಬಹುದಿನ ಉಪವಾಸ ಇಟ್ಟಿದ್ದೆ...ಪಾಪ. ಹೊಸ ವರ್ಷದ ಸಂಭ್ರಮದಲ್ಲಿ ಅದರ ಹೊಟ್ಟೆನು ಸ್ವಲ್ಪ ತುಂಬಲಿ ಅಂತ ಬರಿತ್ತಾ ಇದ್ದೀನಿ...

ವಸಂತ ಮಾಸದ ಕೋಗಿಲೆ ಗಾನವ ಮುದದಿ ಕೇಳುತ್ತಾ, ಚಿಗುರೆಲೆಯ ಹಸಿರು ತೋರಣ ಕಟ್ಟುತ್ತಾ, ಮನೆ ಮುಂದಣ ರಂಗೋಲಿಗೆ ಬಣ್ಣ ತುಂಬುತ್ತಾ,ಎಲ್ಲೆಡೆ ಹೊಸ ಬಗೆಯ ನೋಟವ ಕಾಣುತ್ತಾ ಆಚರಿಸುವ ಹಬ್ಬವೇ ಹೊಸ ಹಬ್ಬ ಎನ್ನುವುದು ಒಂದರ್ಥದಲ್ಲಿ ಸಮಂಜಸವೇ.

ಆದರೆ, ಯುಗದ ಆದಿ ಯುಗಾದಿ ಎಂದು ನಾವು ಯುಗಾದಿಯ ರೀತ್ಯ ಕಾಲ, ಮಾಸ ತಿಥಿಗಳನ್ನೆನ್ನೂ ಅನುಸರಿಸುತ್ತಿಲ್ಲವಲ್ಲ. ಹೆಚ್ಚಿನವರ ದಿನಚರಿ ನಡೆಯುವುದು ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷದ ದಿನ ಎಂದು ಕ್ಯಾಲೆಂಡರ್ ನಲ್ಲಿ ಹಾಕಿರುವಾಗ ನಾವು ಆಚರಿಸದಿದ್ದರೆ ಹೇಗೆ ಅಲ್ವಾ.ಆದರೆ ಆಚರಿಸುವ ಪರಿ ಹೇಗೆ? ನಂಗಂತೂ ಹೊಸದು, ನನ್ನ ಸ್ನೇಹಿತೆಗೆ ಕರೆ ಮಾಡಿದೆ.

ಅವಳು ಹೇಳಿದ್ದೆಲ್ಲಾ ಕೇಳಿದ ಮೇಲೆ ನನಗನಿಸಿದ್ದು, ಹೊಸ ವರ್ಷದ ಮೋಜು ಬರೀ ಕ್ಷಣಿಕ, ಆದರೆ ಅದರ ಸವಿ ಕೊನೆತನಕ. ಇಷ್ಟವಿದ್ದವರು ಅವರವರ ಶಕ್ತ್ಯಾನುಸಾರ ಆಚರಿಸಲಿ, ಮದ್ಯದ ಹೊಳೆ ಹರಿಸಿ ತೇಲಲಿ, ಮುಳುಗಲಿ, ಕಾಡಿನಲ್ಲಿ ಬೆಂಕಿ ಹಚ್ಚಿ ಕುಣಿಯಲಿ, ಬಟ್ಟೆ ಹರಿದುಕೊಂಡು ಕೇಕೇ ಹಾಕಲಿ, ಬೀಚಿನಲ್ಲಿ ಸುತ್ತಲಿ, ಕಂಬಳಿ ಹೊದ್ದು ಮಲಗಲಿ, ಲಿಂಗಬೇಧ ಮರೆತು ಕಲೆಯಲಿ, ಮೆರೆಯಲಿ, ಕೊರಗಲಿ, ಕೊಳತು ನಾರಲಿ, ಸಾಕಪ್ಪ ಸಾಕು ಈ ನಗರ ಜೀವಿಗಳ ವರ್ಷಾಚರಣೆಯ ಸಂಭ್ರಮ.

ಇದರ ಮಧ್ಯ ಕೆಲವು ದೇವಾನುದೇವತೆಗಳಿಗೆ ನೈಟ್ ಶಿಫ್ಟ್ ಬೇರೆ ಅಂತೆ. ವಿಶೇಷ ಪೂಜೆ, ಆರಾಧನೆ. ರಾಮ ರಾಮ. ಅವರವರ ಭಾವಕ್ಕೆ ಅವರವರ ಭಕುತಿಗೆ, ಏನಾದರೂ ಮಾಡಿಕೊಳ್ಳಿ.

ಹಬ್ಬ ಮಾಡೋದರಿಂದ ನಷ್ಟವೇನೂ ಇಲ್ಲ. ಆದರೆ ನಾಳೆ ದಿನ ಅದೇ ಕಷ್ಟ ಆಗಬಾರದು ಅಷ್ಟೆ. ಎಲ್ಲರಿಗೂ ತಿಳಿ ಹೇಳೋ ಯಜಮಾನತಿ ನಾನೇನಲ್ಲ. ಆದರೆ, ಪ್ರತಿ ನಿತ್ಯ ನಮಗಾಗಿ ಸಿಗುವ ಪ್ರತಿ ಕ್ಷಣವನ್ನು ಹೊಸತನಕ್ಕೆ ತಿರುಗಿಸೋಣ, ಹೊಸ ಅವಧಿಯನ್ನು ಹೊಸತನದಿಂದ ರೂಪಿಸಿ, ಪ್ರತಿ ದಿನವನ್ನು ಹೊಸ ದಿನ ಮಾಡೋಣ.

ನಾಳೆಯ ಚಿಂತೆ ಬಿಟ್ಟು, ಇಂದು ಜೀವಿಸೋಣ ಆನ್ನೊ ಪಾಲಿಸಿ ನಂದು. ಅರ್ಥವಿಲ್ಲದ ಆಚರಣೆಯಿಂದ ವ್ಯರ್ಥವಾಗುವ ಸಮಯದ ಸದುಪಯೋಗ ಮಾಡಿಕೊಳ್ಳೊದು ಒಳಿತು ಅನ್ನಿಸುತ್ತದೆ. ಎನಿವೇ,
೨೦೦೮ ನೇ ಹೊಸ ವರ್ಷದ ಶುಭಾಶಯಗಳು.