page1

Pages

Saturday, April 10, 2010

ತೇಜಸ್ವಿ ಬರೀ ಸ್ಮಾರಕಕ್ಕೆ ಸೀಮಿತವಾಗದಿರಲಿ!


ಅಂತೂ ಬಿಡುವು ಮಾಡಿಕೊಂಡು ಬ್ಲಾಗ್ ಗೆ ಅಂತಾ ನಾಲ್ಕು ಸಾಲು ಬರೆಯೋಣ ಅನ್ನಿಸಿತು. ಕೈಲಿ ಪೆನ್ ಹಿಡಿದು ಬಿಳಿ ಹಾಳೆ ಮೇಲೆ ಅಕ್ಷರ ಯಜ್ಞ ಮಾಡಲು ಕೂತರೆ, ಆಗ ತಾನೆ ಕೊಲ್ಲೂರಲ್ಲಿ ಅಪ್ಪನ ಕೈ ಹಿಡಿದು ಓನಾಮ ಬರೆದ ನೆನಪು ಮರುಕಳಿಸಿತು.

ಬರವಣಿಗೆ ಇರಲಿ, ಓದಿರಲಿ,ಯಾವುದೇ ಕೆಲಸವಿರಲಿ ಹೆಚ್ಚು ದಿನ ವಿರಾಮದ ನಂತರ ಮತ್ತೆ ಶುರು ಮಾಡಿದರೆ ಆಗುವ ಎಲ್ಲಾ ಅನನುಕೂಲಗಳ ಹಿನ್ನೆಲೆ ಇಟ್ಟುಕೊಂಡೇ ಬರೆಯಲು ಕೂತೆ. ಅನ್ನಿಸಿದ್ದನ್ನೆಲ್ಲ ಬರೆದು ಮುಗಿಸಿಬಿಡಬೇಕೆಂಬ ಹಂಬಲವಂತೂ ನನಗಿಲ್ಲ.

ಬರೆಯಲು ಸರಿ ಕಾರಣ ಸಿಗಲಿಲ್ಲವೆಂದರೆ ಮನಸ್ಸು ಸಹಕರಿಸುವುದಿಲ್ಲ. ಒಂದು ಸಾಲು ಸೃಷ್ಟಿಯೂಗುವುದಿಲ್ಲ. ಇರಲಿ, ಈಗ ನಮ್ಮಲ್ಲಿ ನಾಲ್ಕಾರು ದಿನದಿಂದ ಬಿಟ್ಟು ಬಿಡದಂತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆಯ ಕಾರಣವೋ ಏನೋ ಬರೆಯುವ ಉಮೇದು ಹುಟ್ಟಿತು.

ತೇಜಸ್ವಿ ಮರೆಯಾಗಿ ೩ ವರ್ಷ ಕಳೆಯಿತು. ಮೊನ್ನೆ ಕುಪ್ಪಳಿಯಲ್ಲಿ ಸ್ಮಾರಕವೂ ಸ್ಥಾಪನೆಯಾಯಿತು. ನೆನ್ನೆ ನಾರ್ವೆ ಕಡೆ ಹೊರಟಿದ್ದವಳು ತುಸು ದೂರ ಹಾಗೆ ಮುಂದೆ ಸಾಗಿ ಸ್ಮಾರಕವನ್ನು ನೋಡಿ ಬಂದೆ. ಆಗಿಂದ ಮನದಲ್ಲಿ ಪ್ರಶ್ನೆ ಉದ್ಭವಿಸುತ್ತಲೇ ಇತ್ತು. ತೇಜಸ್ವಿಗೆ ಸ್ಮಾರಕ ಅಗತ್ಯವೇ? ಯಾವ ಪ್ರಶಸ್ತಿ, ಪಾರಿತೋಷಕ, ಹಾರ ತುರಾಯಿ, ಸ್ಮಾರಕ, ಬೆಂಬಲಿಗರ ದಂಡನ್ನು ನೆಚ್ಚಿಕೊಳ್ಳದ ಎನ್ನ ಗುರುವನ್ನು ಸ್ಮಾರಕ ಎಂಬ ಸೌಧದಲ್ಲಿ ಬಂಧಿಸುವುದು ತರವೇ ಎಂದು.

ಮೂಡಿಗೆರೆಯಲ್ಲಿ ತೇಜಸ್ವಿ ಆಶಯಗಳನ್ನು ಸಾಕಾರಗೊಳಿಸಲು ಒಂದು ಪ್ರತಿಷ್ಠಾನ ಇದೆ. ಅದು ನಿಧಾನಗತಿಯಲ್ಲಿಯಾದರೂ ತನ್ನ ಕಾರ್ಯವನ್ನು ಆರಂಭಿಸಿದೆ. ಆದರೆ, ಕುಪ್ಪಳಿಯಲ್ಲಿ ತೇಜಸ್ವಿ ಹೆಸರಿನಲ್ಲಿ ಏಳು ಬೃಹತ್ ಕಂಬಗಳನ್ನು ನೆಟ್ಟು, ಅದರ ಅರ್ಥ ವಿವರಣೆ ಕೂಡ ನೀಡದೆ, ತೇಜಸ್ವಿ ಆರಾಧಕರ ದಂಡು ನಿರ್ಮಿಸುವುದು ಸರಿಯೆ.

ಒಂದು ವಿಷಯ ನೆನಪಿರಲಿ, ತೇಜಸ್ವಿಯಲ್ಲಿ ಹತ್ತಿರದಿಂದ ಬಲ್ಲ ಆಪ್ತರಿಗಿಂತ ಹತ್ತು ಪಟ್ಟು ಹೆಚ್ಚು ಜನ ಅವರನ್ನು ಮಾನಸಿಕ ಗುರುವಾಗಿ ಭಾವಿಸಿ, ಪರಿಸರ ಸಂರಕ್ಷಣೆಯೋ, ಬರವಣಿಗೆಯೋ, ಫೋಟೋಗ್ರಾಫಿಯೋ, ತಂತ್ರಾಂಶವೋ ಮತ್ತೊಂದು ಕ್ಷೇತ್ರದಲ್ಲಿ ಅವರ ಆಶಯವನ್ನು ಪಾಲಿಸುತ್ತಾ ಬಂದಿದ್ದಾರೆ.

ಈ ಸಂಖ್ಯೆ ಬೆಳೆಯುತ್ತಲೇ ಇದೆ. ಇವರಲ್ಲಿ ಹೆಚ್ಚು ಜನ ಪ್ರತ್ಯಕ್ಷವಾಗಿ ತೇಜಸ್ವಿಯನ್ನು ದೂರದಿಂದಾದರೂ ಕಂಡವರಲ್ಲ. ಕೇವಲ ಅವರ ಬರಹಗಳ ಮೂಲಕ ಸ್ಫೂರ್ತಿ ಪಡೆದು ಸದಭಿರುಚಿ ಕಾರ್ಯಗಳಲ್ಲಿ ತೊಡಗಿಕೊಂಡವರು.

ಕಾಡಿನಲ್ಲಿ ತಾನೇ ತಾನಾಗಿ ಬೆಳೆವ ಮರಗಳ ನೆರಳನಲ್ಲಿ, ಹಕ್ಕಿಗಳ ಇಂಪಿನ ನಡುವೆ ತೇಜಸ್ವಿ ಒಂದಾಗಿ ಇರಲಿ ಎಂಬ ಉದ್ದೇಶದಿಂದ ಕುಪ್ಪಳಿಯಲ್ಲಿ ಸ್ಮಾರಕ ಸ್ಥಾಪಿಸಿದ್ದರೆ ಸರಿ. ಇಲ್ಲವಾದರೆ, ಎಲ್ಲರಂತೆ, ತೇಜಸ್ವಿ ಎಂಬ ಬ್ರಾಂಡ್ ನೇಮ್ ಹಿಂದೆ ಬಿದ್ದು, ಗಲ್ಲಿ ಗಲ್ಲಿಗೆ ಹೆಸರು ಮೂಲೆ ಮೂಲೆಗೆ ಸ್ಮಾರಕ, ಒಂದಿಷ್ಟು ಅವರ ಹೆಸರಿನಲ್ಲಿ ಪ್ರಶಸ್ತಿ, ಪುರಸ್ಕಾರ ಎಂಬಂತಾದರೆ... ಕ್ಷಮಿಸಿ, ತೇಜಸ್ವಿಗೆ ಅದು ಮಾಡುವ ಅಪಮಾನವಾದೀತು.

ಸ್ಮಾರಕ ಮಾಡಲು ಯಾರು ಬೇಡಲಿಲ್ಲ. ನಮ್ಮ ಇಷ್ಟ ನಾವು ಮಾಡಿದೆವು ಎಂದು ಅವರ ಕುಟುಂಬ, ಆಪ್ತರು ಹೇಳಬಹುದು. ಆದರೆ, ಇದು ಖಾಸಗಿ ವಿಷಯವಲ್ಲ. ಇರಲಿ, ತೇಜಸ್ವಿ ಸ್ಮಾರಕ ಸ್ಥಾಪನೆಯಾಯ್ತು ಮುಂದೇನು? ಸುತ್ತಮುತ್ತಲ ಅರಣ್ಯ ಸಂರಕ್ಷಣೆಗೆ ಸ್ಮಾರಕ ಸ್ಥಾಪಕರು ಮುಂದಾಗಬಹುದು. ಕವಿಮನೆ(ಕುವೆಂಪು ಮೂಲಮನೆ) ಯಂತೆ ತೇಜಸ್ವಿ ಹೆಸರಲ್ಲಿ ಪರ್ಣಕುಟೀರ ನಿರ್ಮಿಸಬಹುದು.

ಅಲ್ಲಿ ಅಧ್ಯಯನ ಪೀಠ ಸ್ಥಾಪಿಸಬಹುದು, ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳು, ತೇಜಸ್ವಿ ಆಗಿದ್ದರೂ, ಹೀಗಿದ್ದರೂ, ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು ಎಂದೆಲ್ಲಾ ಬೊಬ್ಬೆ ಹಾಕಬಹುದು. ನಿಮ್ಮ ನಿಮ್ಮ ಕಾರ್ಯಗಳನ್ನು ನಿಮ್ಮ ನಿಮ್ಮ ಚೌಕಟ್ಟಿನಲ್ಲಿ ಸರಿಯಾಗಿ ನಿಭಾಯಿಸಿದರೆ ಅಷ್ಟು ಸಾಕು. ತೇಜಸ್ವಿ ಹೆಸರಿನಲ್ಲಿ ಪೋಗ್ರಾಂ ಮಾಡಿದರೆ ಯಾವ ಪುರಷಾರ್ಥ ಸಾಧನೆಯೂ ಆಗುವುದಿಲ್ಲ.

ತೇಜಸ್ವಿ ಎಂದರೆ ಒಂದೂವರೆ ಅಡಿಪಾಯದ ಮೇಲಿನ 10 ಅಡಿ ಎತ್ತರದ 7 ಕಂಬಗಳು ಎಂದು ಆಗದಿರಲಿ. ಕಲ್ಲಿನ ಪಕ್ಕ ನಾಲ್ಕು ಮರ ನೆಟ್ಟು ಹಕ್ಕಿಗಳನ್ನು ಆಹ್ವಾನಿಸಿ, ಅಲ್ಲೊಂದು ಕಾಡಿನ ನಡುವೆ ಇರುವ ನಿಗೂಢ ಸ್ತಂಭಗಳಿಗೆ ಆಕರ್ಷಣೆ ತುಂಬುತ್ತಾ, ತುಂಬುತ್ತಾ, ಸರಿ ಆಶಯವನ್ನು ಮರೆಯುವಂತೆ ಆಗದಿರಲಿ.

ಏನಾದರೂ ಮಾಡಲೇ ಬೇಕು ಅಂತಾದರೆ, ಕಾಡು ಉಳಿಸಿ, ತೇಜಸ್ವಿ ಪುಸ್ತಕಗಳನ್ನು ಕೊಳ್ಳಿರಿ, ಪರಿಸರ ಉಳಿಸಿ, ಬೆಳಸಿ, ಮಕ್ಕಳಿಗೆ ಒಂದಿಷ್ಟು ಅರಿವು ಮೂಡಿಸಿ, ಸಾತ್ವಿಕ ಬದುಕು ಬಾಳಿರಿ, ನೀವು ಬದುಕಿ ಪರರನ್ನು ಬಾಳಿಸಿ ಅಷ್ಟು ಮಾಡಿ ಸಾಕು. ಇದ್ದಾಗ ಯಾರ ಹಿಡಿತಕ್ಕೂ ಸಿಗದ ತೇಜಸ್ವಿಯನ್ನು ಈಗ ದಯವಿಟ್ಟು ನಿಮ್ಮ ಕೈಗೊಂಬೆ ಮಾಡಿಕೊಳ್ಳಬೇಡಿ.