page1

Pages

Showing posts with label poornachandra tejaswi. Show all posts
Showing posts with label poornachandra tejaswi. Show all posts

Saturday, April 10, 2010

ತೇಜಸ್ವಿ ಬರೀ ಸ್ಮಾರಕಕ್ಕೆ ಸೀಮಿತವಾಗದಿರಲಿ!


ಅಂತೂ ಬಿಡುವು ಮಾಡಿಕೊಂಡು ಬ್ಲಾಗ್ ಗೆ ಅಂತಾ ನಾಲ್ಕು ಸಾಲು ಬರೆಯೋಣ ಅನ್ನಿಸಿತು. ಕೈಲಿ ಪೆನ್ ಹಿಡಿದು ಬಿಳಿ ಹಾಳೆ ಮೇಲೆ ಅಕ್ಷರ ಯಜ್ಞ ಮಾಡಲು ಕೂತರೆ, ಆಗ ತಾನೆ ಕೊಲ್ಲೂರಲ್ಲಿ ಅಪ್ಪನ ಕೈ ಹಿಡಿದು ಓನಾಮ ಬರೆದ ನೆನಪು ಮರುಕಳಿಸಿತು.

ಬರವಣಿಗೆ ಇರಲಿ, ಓದಿರಲಿ,ಯಾವುದೇ ಕೆಲಸವಿರಲಿ ಹೆಚ್ಚು ದಿನ ವಿರಾಮದ ನಂತರ ಮತ್ತೆ ಶುರು ಮಾಡಿದರೆ ಆಗುವ ಎಲ್ಲಾ ಅನನುಕೂಲಗಳ ಹಿನ್ನೆಲೆ ಇಟ್ಟುಕೊಂಡೇ ಬರೆಯಲು ಕೂತೆ. ಅನ್ನಿಸಿದ್ದನ್ನೆಲ್ಲ ಬರೆದು ಮುಗಿಸಿಬಿಡಬೇಕೆಂಬ ಹಂಬಲವಂತೂ ನನಗಿಲ್ಲ.

ಬರೆಯಲು ಸರಿ ಕಾರಣ ಸಿಗಲಿಲ್ಲವೆಂದರೆ ಮನಸ್ಸು ಸಹಕರಿಸುವುದಿಲ್ಲ. ಒಂದು ಸಾಲು ಸೃಷ್ಟಿಯೂಗುವುದಿಲ್ಲ. ಇರಲಿ, ಈಗ ನಮ್ಮಲ್ಲಿ ನಾಲ್ಕಾರು ದಿನದಿಂದ ಬಿಟ್ಟು ಬಿಡದಂತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆಯ ಕಾರಣವೋ ಏನೋ ಬರೆಯುವ ಉಮೇದು ಹುಟ್ಟಿತು.

ತೇಜಸ್ವಿ ಮರೆಯಾಗಿ ೩ ವರ್ಷ ಕಳೆಯಿತು. ಮೊನ್ನೆ ಕುಪ್ಪಳಿಯಲ್ಲಿ ಸ್ಮಾರಕವೂ ಸ್ಥಾಪನೆಯಾಯಿತು. ನೆನ್ನೆ ನಾರ್ವೆ ಕಡೆ ಹೊರಟಿದ್ದವಳು ತುಸು ದೂರ ಹಾಗೆ ಮುಂದೆ ಸಾಗಿ ಸ್ಮಾರಕವನ್ನು ನೋಡಿ ಬಂದೆ. ಆಗಿಂದ ಮನದಲ್ಲಿ ಪ್ರಶ್ನೆ ಉದ್ಭವಿಸುತ್ತಲೇ ಇತ್ತು. ತೇಜಸ್ವಿಗೆ ಸ್ಮಾರಕ ಅಗತ್ಯವೇ? ಯಾವ ಪ್ರಶಸ್ತಿ, ಪಾರಿತೋಷಕ, ಹಾರ ತುರಾಯಿ, ಸ್ಮಾರಕ, ಬೆಂಬಲಿಗರ ದಂಡನ್ನು ನೆಚ್ಚಿಕೊಳ್ಳದ ಎನ್ನ ಗುರುವನ್ನು ಸ್ಮಾರಕ ಎಂಬ ಸೌಧದಲ್ಲಿ ಬಂಧಿಸುವುದು ತರವೇ ಎಂದು.

ಮೂಡಿಗೆರೆಯಲ್ಲಿ ತೇಜಸ್ವಿ ಆಶಯಗಳನ್ನು ಸಾಕಾರಗೊಳಿಸಲು ಒಂದು ಪ್ರತಿಷ್ಠಾನ ಇದೆ. ಅದು ನಿಧಾನಗತಿಯಲ್ಲಿಯಾದರೂ ತನ್ನ ಕಾರ್ಯವನ್ನು ಆರಂಭಿಸಿದೆ. ಆದರೆ, ಕುಪ್ಪಳಿಯಲ್ಲಿ ತೇಜಸ್ವಿ ಹೆಸರಿನಲ್ಲಿ ಏಳು ಬೃಹತ್ ಕಂಬಗಳನ್ನು ನೆಟ್ಟು, ಅದರ ಅರ್ಥ ವಿವರಣೆ ಕೂಡ ನೀಡದೆ, ತೇಜಸ್ವಿ ಆರಾಧಕರ ದಂಡು ನಿರ್ಮಿಸುವುದು ಸರಿಯೆ.

ಒಂದು ವಿಷಯ ನೆನಪಿರಲಿ, ತೇಜಸ್ವಿಯಲ್ಲಿ ಹತ್ತಿರದಿಂದ ಬಲ್ಲ ಆಪ್ತರಿಗಿಂತ ಹತ್ತು ಪಟ್ಟು ಹೆಚ್ಚು ಜನ ಅವರನ್ನು ಮಾನಸಿಕ ಗುರುವಾಗಿ ಭಾವಿಸಿ, ಪರಿಸರ ಸಂರಕ್ಷಣೆಯೋ, ಬರವಣಿಗೆಯೋ, ಫೋಟೋಗ್ರಾಫಿಯೋ, ತಂತ್ರಾಂಶವೋ ಮತ್ತೊಂದು ಕ್ಷೇತ್ರದಲ್ಲಿ ಅವರ ಆಶಯವನ್ನು ಪಾಲಿಸುತ್ತಾ ಬಂದಿದ್ದಾರೆ.

ಈ ಸಂಖ್ಯೆ ಬೆಳೆಯುತ್ತಲೇ ಇದೆ. ಇವರಲ್ಲಿ ಹೆಚ್ಚು ಜನ ಪ್ರತ್ಯಕ್ಷವಾಗಿ ತೇಜಸ್ವಿಯನ್ನು ದೂರದಿಂದಾದರೂ ಕಂಡವರಲ್ಲ. ಕೇವಲ ಅವರ ಬರಹಗಳ ಮೂಲಕ ಸ್ಫೂರ್ತಿ ಪಡೆದು ಸದಭಿರುಚಿ ಕಾರ್ಯಗಳಲ್ಲಿ ತೊಡಗಿಕೊಂಡವರು.

ಕಾಡಿನಲ್ಲಿ ತಾನೇ ತಾನಾಗಿ ಬೆಳೆವ ಮರಗಳ ನೆರಳನಲ್ಲಿ, ಹಕ್ಕಿಗಳ ಇಂಪಿನ ನಡುವೆ ತೇಜಸ್ವಿ ಒಂದಾಗಿ ಇರಲಿ ಎಂಬ ಉದ್ದೇಶದಿಂದ ಕುಪ್ಪಳಿಯಲ್ಲಿ ಸ್ಮಾರಕ ಸ್ಥಾಪಿಸಿದ್ದರೆ ಸರಿ. ಇಲ್ಲವಾದರೆ, ಎಲ್ಲರಂತೆ, ತೇಜಸ್ವಿ ಎಂಬ ಬ್ರಾಂಡ್ ನೇಮ್ ಹಿಂದೆ ಬಿದ್ದು, ಗಲ್ಲಿ ಗಲ್ಲಿಗೆ ಹೆಸರು ಮೂಲೆ ಮೂಲೆಗೆ ಸ್ಮಾರಕ, ಒಂದಿಷ್ಟು ಅವರ ಹೆಸರಿನಲ್ಲಿ ಪ್ರಶಸ್ತಿ, ಪುರಸ್ಕಾರ ಎಂಬಂತಾದರೆ... ಕ್ಷಮಿಸಿ, ತೇಜಸ್ವಿಗೆ ಅದು ಮಾಡುವ ಅಪಮಾನವಾದೀತು.

ಸ್ಮಾರಕ ಮಾಡಲು ಯಾರು ಬೇಡಲಿಲ್ಲ. ನಮ್ಮ ಇಷ್ಟ ನಾವು ಮಾಡಿದೆವು ಎಂದು ಅವರ ಕುಟುಂಬ, ಆಪ್ತರು ಹೇಳಬಹುದು. ಆದರೆ, ಇದು ಖಾಸಗಿ ವಿಷಯವಲ್ಲ. ಇರಲಿ, ತೇಜಸ್ವಿ ಸ್ಮಾರಕ ಸ್ಥಾಪನೆಯಾಯ್ತು ಮುಂದೇನು? ಸುತ್ತಮುತ್ತಲ ಅರಣ್ಯ ಸಂರಕ್ಷಣೆಗೆ ಸ್ಮಾರಕ ಸ್ಥಾಪಕರು ಮುಂದಾಗಬಹುದು. ಕವಿಮನೆ(ಕುವೆಂಪು ಮೂಲಮನೆ) ಯಂತೆ ತೇಜಸ್ವಿ ಹೆಸರಲ್ಲಿ ಪರ್ಣಕುಟೀರ ನಿರ್ಮಿಸಬಹುದು.

ಅಲ್ಲಿ ಅಧ್ಯಯನ ಪೀಠ ಸ್ಥಾಪಿಸಬಹುದು, ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳು, ತೇಜಸ್ವಿ ಆಗಿದ್ದರೂ, ಹೀಗಿದ್ದರೂ, ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು ಎಂದೆಲ್ಲಾ ಬೊಬ್ಬೆ ಹಾಕಬಹುದು. ನಿಮ್ಮ ನಿಮ್ಮ ಕಾರ್ಯಗಳನ್ನು ನಿಮ್ಮ ನಿಮ್ಮ ಚೌಕಟ್ಟಿನಲ್ಲಿ ಸರಿಯಾಗಿ ನಿಭಾಯಿಸಿದರೆ ಅಷ್ಟು ಸಾಕು. ತೇಜಸ್ವಿ ಹೆಸರಿನಲ್ಲಿ ಪೋಗ್ರಾಂ ಮಾಡಿದರೆ ಯಾವ ಪುರಷಾರ್ಥ ಸಾಧನೆಯೂ ಆಗುವುದಿಲ್ಲ.

ತೇಜಸ್ವಿ ಎಂದರೆ ಒಂದೂವರೆ ಅಡಿಪಾಯದ ಮೇಲಿನ 10 ಅಡಿ ಎತ್ತರದ 7 ಕಂಬಗಳು ಎಂದು ಆಗದಿರಲಿ. ಕಲ್ಲಿನ ಪಕ್ಕ ನಾಲ್ಕು ಮರ ನೆಟ್ಟು ಹಕ್ಕಿಗಳನ್ನು ಆಹ್ವಾನಿಸಿ, ಅಲ್ಲೊಂದು ಕಾಡಿನ ನಡುವೆ ಇರುವ ನಿಗೂಢ ಸ್ತಂಭಗಳಿಗೆ ಆಕರ್ಷಣೆ ತುಂಬುತ್ತಾ, ತುಂಬುತ್ತಾ, ಸರಿ ಆಶಯವನ್ನು ಮರೆಯುವಂತೆ ಆಗದಿರಲಿ.

ಏನಾದರೂ ಮಾಡಲೇ ಬೇಕು ಅಂತಾದರೆ, ಕಾಡು ಉಳಿಸಿ, ತೇಜಸ್ವಿ ಪುಸ್ತಕಗಳನ್ನು ಕೊಳ್ಳಿರಿ, ಪರಿಸರ ಉಳಿಸಿ, ಬೆಳಸಿ, ಮಕ್ಕಳಿಗೆ ಒಂದಿಷ್ಟು ಅರಿವು ಮೂಡಿಸಿ, ಸಾತ್ವಿಕ ಬದುಕು ಬಾಳಿರಿ, ನೀವು ಬದುಕಿ ಪರರನ್ನು ಬಾಳಿಸಿ ಅಷ್ಟು ಮಾಡಿ ಸಾಕು. ಇದ್ದಾಗ ಯಾರ ಹಿಡಿತಕ್ಕೂ ಸಿಗದ ತೇಜಸ್ವಿಯನ್ನು ಈಗ ದಯವಿಟ್ಟು ನಿಮ್ಮ ಕೈಗೊಂಬೆ ಮಾಡಿಕೊಳ್ಳಬೇಡಿ.

Saturday, April 11, 2009

ಮತ್ತದೇ ಬೇಸರ, ಅದೇ ಹುರುಪು


"ಮಲೆಸೀಮೆಯಲ್ಲಿ ಈ ಪಾಟಿ ಬಿಸಿಲು ಕಂಡಿದ್ದೇ ಇಲ್ಲಾ ಭಟ್ಟರೇ, ಎಲ್ಲಿಗಾದ್ರೂ ಹೊಗುವ ಬಂದ್ರೆ ರಣಬಿಸಿಲು ನೆತ್ತಿ ಸುಡುತ್ತೆ ?" , ಮನೆ ಮುಂದಿನ ಚಿಟ್ಟೆಯಲ್ಲಿ ವಿರಮಿಸಿದ್ದ ಮೇಗಿನ ಗದ್ದೆ ರಾಮಣ್ಣ, ಅಣ್ಣ (ಅಪ್ಪಯ್ಯ)ನ ಜೊತೆ ಹರಟುತ್ತಿದ್ದ.

ಅವನ ಮಾತಿಗೆ ಗೌಣುಹಾಕುತ್ತಾ ನನ್ನೆಡೆ ತಿರುಗಿದರು. ಅದು ರಾಮನಿಗೆ ಕಾಫಿ ಸಮಾರಾಧನೆ ಅಣಿ ಮಾಡು ಎನ್ನುವ ಸೂಚನೆ. ನಾನು ಒಳನಡೆದೆ.

ಇಬ್ಬರೂ ಮಟ ಮಟ ಮಧ್ಯಾಹ್ನ ಕಾಫಿ ಹೀರಿ ಮತ್ತೆ ಮಾತಲ್ಲೆ ಊಟ ಮುಗಿಸಿದ್ದರು. ರಾಮಣ್ಣನಿಗೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಓಡಾಟ ಹೆಚ್ಚು, ಅದೂ ಯುಗಾದಿ ನಂತರ ಸುಮಾರು ಶುಭ ಸಮಾರಂಭಗಳಿಗೆ ಹೇಳಿಕೆ ನೀಡುವುದು. ಚಪ್ಪರ ಹಾಕುವುದು, ಮಂಟಪ ಮಾಡುವುದರಿಂದ ಹಿಡಿದು ಎಲ್ಲಾ ಕೆಲ್ಸಗಳಲ್ಲಿ ವ್ಯಸ್ತನಾಗಿರುತ್ತಿದ್ದ.

ಹೀಗೆ ಸದಾ ಚಟುವಟಿಕೆಯ ಜೀವಿ ರಾಮಣ್ಣನಿಗೂ ಬಿಸಿಲಿನ ಝಳ ಈ ಬಾರಿ ಚುರುಕು ಮುಟ್ಟಿಸಿದ್ದಂತೂ ನಿಜ. ಚಿಕ್ಕಂದಿನಿಂದ ಆತನನ್ನು ನಾವೆಲ್ಲಾ ರಾಮಣ್ಣ ಅಂತೆಲೆ ಕರೆಯೋದು.

ಆದ್ರೆ ಆತನಿಗೆ ಏನಿಲ್ಲಾ ಅಂದ್ರೂ 45-50 ರ ಪ್ರಾಯ ಇರಬಹುದು ಅಥವಾ ಅದಕ್ಕಿಂತ ಹೆಚ್ಚಿರಬಹುದು. ಆದ್ರೆ ಆತನ ಚುರುಕುತನ ನಮ್ಮ ವಯಸ್ಸಿನವರಿಗೂ ಇಲ್ಲ. ಎಣ್ಣೆಗಂಪು ಬಣ್ಣದ ರಾಮಪ್ಪನ ಆಸ್ತಿ ಎಂದೂ ಮಾಸದ ಮುಗ್ಧ ನಗು.

ಎರಡು ಕಿವಿಗೂ ಒಂಟಿ ಧರಿಸಿ, ಸದಾ ಅದೇ ಮಾಸಿದ ಬಿಳಿ ಅಂಗಿ ಮೊಳಕಾಲಿಗಿಂತ ಮೇಲೆ ಉಟ್ಟ ಕಚ್ಚೆ ಪಂಚೆ. ಕೈಲಿ ಎಂದಿನಂತೆ ಕರಿ ಬಣ್ಣದ ಛತ್ರಿ. ಹೊಗೆಸೊಪ್ಪು ಹೊಸೆಯುತ್ತಾ ಗೊಟಡಿಕೆ ಮೆಲ್ಲುತ್ತಾ ಶೃಂಗೇರಿ, ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ಶಿವಮೊಗ್ಗ.... ಸೀಮೆಯ ವಕ್ತಾರನಂತೆ ಸದಾ ಓಡಾಡುವ ಇವನನ್ನು ನೋಡದವರೆ ವಿರಳ.

ಸಹಕಾರ ಸಾರಿಗೆ, ನಿಸ್ಮಿತಾ, ಮಲ್ಲಿಕಾರ್ಜುನ, ಕೆಕೆಬಿ, ತುಂಗಭದ್ರಾ. ಅವಿಭಜಿತ ಶಂಕರ್ ಟ್ರಾನ್ಸ್ ಪೋರ್ಟ್ ಹೀಗೆ ಎಲ್ಲಾ ವಾಹನದಲ್ಲೂ ಡ್ರೈವರ್ ಪಕ್ಕದ ಬದಿ ಸೀಟು ಖಾಯಂ.

ಸಾಮಾನ್ಯವಾಗಿ ರಾಮಣ್ಣ ಬಸ್ ಸ್ಪಾಪ್ ಗಳಲ್ಲಿ ನಿಂತು, ಬಸ್ ಕಾಯ್ದು ಹತ್ತುತ್ತಿದ್ದದ್ದೆ ಕಮ್ಮಿ. ಮೊದಮೊದಲೆಲ್ಲಾ ಇವನು ಕೈ ಒಡ್ಡಿದ ಕಡೆಯೆಲ್ಲಾ ಬಸ್ ನಿಲ್ಲಿಸುತ್ತಿದ್ದ ಡ್ರೈವರ್ ಗಳು, ಬರಬರುತ್ತಾ ಇವನ ಕಡೆ ಉದಾಸೀನರಾಗುತ್ತಾ ಬಸ್ ಹಾಗೆ ಹೊಡೆದುಕೊಂಡು ಹೋಗತೊಡಗಿದರು.

ಆದ್ರೆ ಇವ ಬಿಡಬೇಕಲ್ಲ. ತಿಂಗಳ ಕೆಳಗೆ ಜೈಪುರದಿಂದ ಮುಂದೆ ಕಲ್ಕೆರೆಗೂ ಮುನ್ನ ಸಾಮಾನ್ಯವಾಗಿ ಕೈ ಒಡ್ಡಿ ಬಸ್ ನಿಲ್ಲಿಸುತ್ತಿದ್ದ ರಾಮಣ್ಣ, ಮುಷ್ಟಿಯಲ್ಲಿ ಕಲ್ಲು ಹಿಡಿದು ಗಣ ಬಂದ ಹಾಗೆ ಆಡುತ್ತಾ ಬಸ್ ಗೆ ಅಡ್ಡವಾಗಿ ನಿಂತ್ತಿದ್ದನಂತೆ. ಡ್ರೈವರ್ ಬ್ರೇಕ್ ಒತ್ತಿದ್ದ ರಭಸಕ್ಕೆ ಹಲವರ ಮುಸುಡಿ, ಕಿವಿ ಮೂಗುಗಳು ಜಖಂ ಆಗಿದ್ದಂತೂ ಸತ್ಯ.

ಆಮೇಲೆ ಏನೂ ಅರಿಯದವನಂತೆ ಮೆಲ್ಲಗೆ ಬಸ್ ಏರಿ ತನ್ನ ಸೀಟಿನಲ್ಲಿ ಕೂತ ರಾಮಣ್ಣನಿಗೆ ಕಂಡೆಕ್ಟರ್ ಬೈಗುಳ ಪುಷ್ಪವೃಷ್ಟಿಯಂತೆ ಅನಿಸಿ, ಎಂದಿನ ಪೆಕರು ನಗೆ ನಕ್ಕನಂತೆ. ಕಡೆಗೆ ಕಂಡೆಕ್ಟರ್ ಹಣೆ ಬಡಿದುಕೊಂಡು ಹೋದನಂತೆ.

ಈ ಬಗ್ಗೆ ಅಣ್ಣ ಪ್ರಶ್ನಿಸಿ ಯಾಕೋ ರಾಮ ಹೀಗೆಲ್ಲಾ ಮಾಡಿದೆಯಂತೆ ಅಂದ್ರೆ, "ಅಯ್ಯೋ ಬಿಡಿ ಭಟ್ಟರೆ, ಹುಡುಗು ಮುಂಡೇವು. ಅವಕ್ಕೆನೂ ಗೊತ್ತು. ಅವರಪ್ಪನ ಕಾಲದಿಂದ ನಾನು ಬಸ್ ನಲ್ಲಿ ಓಡಾಡಿದ ಸರ್ವೀಸ್ ಇದೆ ನಂಗೆ. ಒಂಚೂರು ಮರ್ಯಾದೆ ಕೊಟ್ಟು ಅಭ್ಯಾಸ ಇಲ್ಲ ಈಗೀನಾ ಮುಂಡೆವಕ್ಕೆ" ಅನ್ನೋದೆ.

ರಾಮಣ್ಣನ್ನಂತವರು ನಮ್ಮ ಸೀಮೆಯಲ್ಲಿ ಹುಡುಕಿದರೆ ನೂರು ಮಂದಿ ಸಿಗುತ್ತಾರೆ. ಆದ್ರೆ ಇತ್ತೀಚೆಗೆ ರಾಮಣ್ಣನಂಥಹ ಟಿಪಿಕಲ್ ಮಲೆನಾಡಿನ ಜೀವಿಗಳ ಬಗ್ಗೆ ಒಂದಷ್ಟು ಹೆಚ್ಚಿನ ಆಸ್ಥೆ ಮೂಡಿತ್ತು.

ಅದಕ್ಕೆ ಕಾರಣ ಇಷ್ಟೆ. ತೇಜಸ್ವಿ ಅವರ ಕಣ್ಮರೆಯ ವಿಷಾದ ರಾಗ, ಮತ್ತೆ ಇಂಥಹ ಜನ ನೋಡಿ ಮೂಡುವ ಹುರುಪು. ಕಾಲ ಎಲ್ಲವನ್ನೂ ಮರೆಸುತ್ತದೆ ಅನ್ನೋ ಮಾತನ್ನು ಕಾಲ ಎಲ್ಲವನ್ನು ಜೀವಂತ ಇರಿಸುತ್ತದೆ. ಹೀಗಲ್ಲಾದಿದ್ದರೆ ಹಾಗೆ ಎಂದು ತಿದ್ದುಕೊಳ್ಳೋದು ವಾಸಿ ಅನಿಸುತ್ತದೆ.

ತೇಜಸ್ವಿ ಮರೆತರೆ ನಮ್ಮನ್ನು ನಾವು ಮರೆತಂತೆ
ಅಕ್ಕಾ ಎಷ್ಟು ಚೆಂದಿತ್ತು ಗೊತ್ತಾ? ಮೇಷ್ಟ್ರು ಮೊದಲು ಹೇಳಿದಾಗ ನಾವು ಎಲ್ಲೋ ಇಲ್ಲಿ ಮನೆ ಹತ್ರಾ ಇರೋ ಕಾಡು ತರಾನೇ ಏನೋ ತೋರಿಸಿ ಕಳಿಸ್ತಾರೆ ಅಂತಾ ಮಾಡಿದ್ವಿ. ತೇಜಸ್ವಿ ಅಜ್ಜ ಓಡಾಡಿದ ಕಾಡಂತೆ ಕಣೆ. ಹೋಗ್ ನಿಂಗೆ ಪುಣ್ಯ ಇಲ್ಲ ಹೀಗೆ ಸಾಗಿತ್ತು ಪುಟ್ಟ ಪೋರಿಯ ಮಾತಿನ ಝರಿ..

ತೇಜಸ್ವಿ ಅವರ ನೆನಪಿನಲ್ಲಿ ಏ.5 ರಂದು ನಡೆದ ಚಾರಣ ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ವರ್ಷಿಣಿಯ ಸಂಭ್ರಮಕ್ಕೆ ಎಣೆಯಿಲ್ಲ. ಬರೀ ಮನೆ ಸುತ್ತಣ ಕಾಡಿನಲ್ಲಿ ನಮ್ಮ ಜೊತೆ ಅಲೆಯುತ್ತಾ ಇದ್ದ ಹುಡುಗಿಗೆ ಒಮ್ಮೇಲೆ ಹೊಸದಾದ ಸಿರಿ ಕಂಡ ಅನುಭವ.

ಮೂಡಿಗೆರೆಯ ವಿಸ್ಮಯಾ ಟ್ರಸ್ಟ್ ನ ಚಾರಣ ಕಾರ್ಯಕ್ರಮಕ್ಕೆ ಗೆಳತಿಯರೊಡನೆ ನನ್ನ ಚಿಕ್ಕನ ಮಗಳು ೧೦ ವರ್ಷದ ವರ್ಷಿಣಿ ಅಲ್ಲಲ್ಲ ವಾಕ್ ವರ್ಷಿಣಿ(ಮಾತಿನ ಮಳೆಗೆರೆಯುವವಳು ಅಹಹ್ಹಹಹಾ) ಕೂಡ ಹೋಗಿದ್ದಳು.

ಆರೋಗ್ಯ ಕೊಂಚ ಏರುಪೇರಾದ ಕಾರಣ ನೆಚ್ಚಿನ ಗುರು ತೇಜಸ್ವಿ ಅಲೆದಾಡಿದ ತಾಣಕ್ಕೆ ನಾನು ಹೋಗಲಾಗಲಿಲ್ಲ. ಆದರೆ, ವರ್ಷಿಣಿಯ ಮಾತು, ಸಂಭ್ರಮ ಆ ನೋವನ್ನು ಮರೆ ಮಾಡಿತು.

ಅಲ್ಲಿ ಪುಟ್ಟ ಪೋರಿ ಪ್ರಕೃತಿಯ ಮಡಿಲಿನಲ್ಲಿ ವಿಜ್ಞಾನಿಗಳು, ಪರಿಸರವನ್ನು ತಿಳಿದವರು, ತೇಜಸ್ವಿ ಒಡನಾಡಿಗಳ ಜೊತೆ ಏನೆಲ್ಲಾ ಕಲಿತಿರಬಹುದು. ಚಾರಣ ಮಾಡಿ, ದಿನ ನೋಡೊ ಗಿಡ ಮರ ಆದ್ರೂ ವೈಜ್ಞಾನಿಕ ದೃಷ್ಟಿಯಿಂದ ಅವುಗಳ ಬಗ್ಗೆ ಇನ್ನಷ್ಟು ತಿಳಿದಾಗ ಆಗುವ ಸಂತೋಷ ವರ್ಣಿಸಲು ಬರುವುದಿಲ್ಲ.

ಯಾರೂ ಬೇಡ ತೇಜಸ್ವಿ ಅವರ ಜೀವಂತ ಪಾತ್ರ ಬಿರಿಯಾನಿ ಕರಿಯಪ್ಪನನ್ನು ನೋಡಿದರೆ ಸಾಕು ತೇಜಸ್ವಿ ಬರೆದ ಕಥೆಗಳು ನಮಗರಿವಿಲ್ಲದಂತೆ ಕಣ್ಮುಂದೆ ಬಂದು ನಿಲ್ಲುತ್ತದೆ.

ತೇಜಸ್ವಿ ಅಗಲಿದ ನಂತರ ಅವರ ಬಗ್ಗೆ ಜನರಲ್ಲಿ ಮೂಡುತ್ತಿರುವ ಆಸಕ್ತಿ , ಆದರಗಳನ್ನು ಕಂಡರೆ ಖುಷಿಯಾಗುತ್ತದೆ. ಆದರೆ ಅದೇ ರೀತಿ ಒಂದಿಷ್ಟು ಭಯ ಕೂಡ ಆಗುತ್ತದೆ. ಯಾವ ನಿರ್ಜೀವ ಶಕ್ತಿಗೂ ನಿಲುಕದಂತಿದ್ದವರು ತೇಜಸ್ವಿ.

ಆದರೆ ಎಲ್ಲಿ ನಮ್ಮ ಜನ ತೇಜಸ್ವಿ ಎಂಬ ಬ್ರಾಂಡ್ ನೇಮ್ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೋ ಎಂಬ ಅಳುಕು ಮನದ ಮೂಲೆಯಲ್ಲಿ ಕೊರೆಯುತ್ತಿದೆ.

ಏನೇ ಆದರೂ ಪ್ರಕೃತಿಯಲ್ಲಿ ಸತ್ವವಿರುವುದಷ್ಟೇ ಉಳಿಯುವುದು. ಸರಳ ಜೀವಿಗೆ ಅಭಿಮಾನದ ಕಾಮನಬಿಲ್ಲು ಸುತ್ತಿ ಬೆಟ್ಟ ಮೇಲೆ ಕೂರಿಸಿ ಉತ್ಸವ ಮಾಡುವುದು ಅನಗತ್ಯ. ನಾವಂತೂ ನಿತ್ಯ ಕಾಯಕದಲ್ಲೇ ಮೂಡಿಗೆರೆ ಸಂತನನ್ನು ಕಾಣುತ್ತೇವೆ.
ಚಿತ್ರಗಳ ಕೃಪೆ: ದಟ್ಸ್ ಕನ್ನಡ

Saturday, April 12, 2008

ಮಳೆ ನಿಂತು ಹೋದ ಮೇಲೆ ಹನಿ ಎರಡು ಉದುರಿದೆ

Dr.Rajtejaswi
ಮೋಜಿನ ಮಳೆ ನಿಂತು ಆಗಲೇ ನಾಲ್ಕೈದು ದಿನವಾಯ್ತು. ಆದರೆ ಈ ವಾರ ಅಂತಹ ಸಂಭ್ರಮವಿಲ್ಲ. ಮಧ್ಯದಲ್ಲಿ ಯುಗಾದಿ ಹಬ್ಬ , ಹೋಳಿಗೆ ಊಟ ಮೆದ್ದಿದ್ದು ಬಿಟ್ಟರೆ.

ಬಾಕಿಯಂತೆ ಏ.೫ ರಿಂದ ಏ ೧೨ ರ ವರೆಗೂ ಮನಸ್ಸಿಗೆ ಇಬ್ಬರನ್ನು ನೆನೆಯದೇ ಇರಲು ಸಾಧ್ಯವಾಗುವುದಿಲ್ಲ. ನೆಚ್ಚಿನ ಗುರು, ಮಾರ್ಗದರ್ಶಿ ತೇಜಸ್ವಿ , ನಾಡಿನ ಸಾಂಸ್ಕೃತಿಕ ಸಂಕೇತ ಡಾ. ರಾಜ್ ಕುಮಾರ್.

ತೇಜಸ್ವಿ ನಿರುತ್ತರದಲ್ಲಿ ಕವಿದ ಮೋಡ ಚದುರಿ ಮಳೆ ಸುರಿಸಿ, ಹರುಷವನ್ನು ಅರಿಸಿ ಸಾಗುತ್ತಿದೆ. ರಾಜ್ ನೆನಪಿನಲ್ಲಿ ಸ್ಮಾರಕ ಎಂಬ ನೆಪದಲ್ಲಿ ರಾಜ್ ಅವರ ಕನಸುಗಳು ಕಮರುತ್ತಿದೆ. ಈ ಇಬ್ಬರು ಸರಳ ಜೀವಿಗಳು ಇಂದಿನವರ ಜಂಜಾಟವನ್ನು ನೋಡುತ್ತಿದ್ದರೆ ಖಂಡಿತಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದರು ಎನಿಸುತ್ತದೆ.

ಸ್ಮಾರಕ ನಿರ್ಮಾಣ, ಅರ್ಥವಿಲ್ಲದ ಆಚರಣೆಗೆ ತೇಜಸ್ವಿಯಂತೂ ವಿರೋಧಿಸುತ್ತಿದ್ದರು. ರಾಜ್ ಅವರು ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಕೊಂಡು ಬೆಳೆದವರು. ನಗರದಲ್ಲಿದ್ದರೂ ಸದಾ ಹಳ್ಳಿಮನೆಯ ವಾಸ್ತವ್ಯಕ್ಕಾಗಿ ಹಾತೊರೆಯುತ್ತಿದ್ದ ಜೀವ.

ತೇಜಸ್ವಿ ನಿಸರ್ಗದ ರಮಣೀಯತೆಗೆ ಸೋತು, ಪ್ರಕೃತಿಯ ಮಡಿಲಲ್ಲಿ ಸಾಧನೆ, ಸಂಶೋಧನೆ ಮಾಡುತ್ತಾ, ಮುಗ್ಧ ಜನರೊಡನೆ ಬೆರೆತು ಸಾರ್ಥಕ ಬದುಕು ಬಾಳಿದವರು. ಈ ಎರಡು ಚೇತನಗಳಲ್ಲಿ ನಾನು ಇಷ್ಟಪಡುವುದು ಸರಳತೆ ಹಾಗೂ ಜೀವನ ಪ್ರೀತಿ, ಉತ್ಸಾಹ.

ಇವರಿಬ್ಬರ ಚಿಂತನೆಗಳು ಸ್ಮಾರಕಕ್ಕೆ ಸೀಮಿತವಾಗದೇ ಅವರ ಸಾಧನೆ, ಜೀವನ ಪ್ರೀತಿ ಎಲ್ಲರಲ್ಲೂ ಆಸುಹೊಕ್ಕದರೆ ಎಷ್ಟು ಸುಂದರ. ಅದ್ಭುತ ಮಾಯಾಲೋಕದ ಕನಸು ಕಣ್ಮುಂದೆ ಕಾಣಿಸುತ್ತಿದೆ. ವಿರಮಿಸುತ್ತೇನೆ ಸದ್ಯಕ್ಕೆ.

Saturday, April 14, 2007

ಎಲ್ಲಿ ಹೋದೆ ನನ್ನ ಗುರುವೇ, ಓ ನನ್ನ ತೇಜಸ್ವಿ


ಎಲ್ಲಿ ಹೋದೆ ನನ್ನ ಗುರುವೇ ....

ಮೂಡಿಗೆರೆಯ ನೀನೇಕೆ ತೊರೆದೆ
ಮಲೆನಾಡನು ಬಿಟ್ಟು ನೀ ಹೇಗಿರುವೆ
ಮಲೆನಾಡಿನ ಮಾಯಾವಿ ನಿನ್ನಂತೋರೊ ಬಲು ವಿರಳ
ಅದು ಹೇಗಿದ್ದೆ ನೀನಷ್ಟು ಸರಳ
ರಸಋಷಿಯ ಪುತ್ರನೆ.. . .

ನಮಗೆ ಜೀವರಸವ ನೀಡಿದವನೆ
ವನರಾಶಿಯ ರಹಸ್ಯ ಬೇಧಿಸಿದ ಚಿದಂಬರನೆ
ಮರ್ಮಕ್ಕೆ ತಾಕುವಂತೆ ಕುಟುಕುತ್ತಿದ್ದ ಕರ್ವಾಲೋವೆ
ಕಿವಿ ನಿನ್ನ ಹುಡುಕುತ್ತಿದೆ....

ಕರಿಯಣ್ಣ ಮಾಡಿದ ಬಿರಿಯಾನಿ ಆರುತ್ತಿದೆ ಬೇಗ ಬಾ...
ಮುಸ್ಸಂಜೆಯಲ್ಲಿ ಕಿರುಗೂರಿಗೆ ಹೋಗೋಣ ಬಾ
ಖುದ್ದೂಸ್ಸನ ಎಕ್ಸ್ ಪ್ರೆಸ್ ಹತ್ತಿ ಜುಗಾರಿ ಕ್ರಾಸ್ ನಲ್ಲಿ ಇಳಿಯೋಣ
ನೀನಿರದೆ ಅಬಚೂರು ಚೂರಾಗಿದೆ ..

ಅಣ್ಣನ ನೆನಪು ಹೇಳು ಬಾ.. ಮಂದಣ್ಣ ಕಾದು ಕುಂತವ್ನೆ
ನಿನಗಾಗಿ ತಬರ ಕಾದಿದ್ದಾನೆ, ಕುಬಿ ಇಯಾಲ ಬಂದಿದ್ದಾರೆ
ಇನ್ನೇಕೆ ತಡ.... ಬಾ ನನ್ನ ಗುರುವೇ

ಹಕ್ಕಿಗಳ ಗಾಯನ, ಕಾನನದ ಮೌನ ನಿನ್ನೊಂದಿಗೆ ಲೀನವಾಗಿದೆ.
ತೇಜಸ್ವಿ ನಿನ್ನ ಮಾಯಾಲೋಕದಲ್ಲಿ ಸುತ್ತುವೆ ಅನವರತ
ಜಗವಿರುವವರೆಗೂ, ಹಸಿರಿರುವವರೆಗೂ ನೆನಪಲ್ಲಿ ನೀ ಉಳಿಯುವೆ ಶಾಶ್ವತ

ನಿಗೂಢ ಮನುಷ್ಯ ನಿನ್ನಿಂದ ಸಹಜ ಕೃಷಿಯ ಕಲಿಯುವ ಆಸೆ
ನಿನ್ನ ಪರಿಸರದ ಹಕ್ಕಿಗಳ ಕಥೆ ಕೇಳುವಾಸೆ
ಮರಳಿ ಬಾ... ನನ್ನ ಗುರುವೇ

ಪೂರ್ಣಚಂದ್ರ ನಿನಗಾಗಿ ಮೂಡಿಗೆರೆ ಕಾದಿದೆ
ನಿನ್ನೊಡಲಿಲ್ಲದಿದ್ದರೂ ನಿನ್ನ ಉಸಿರು ಹಸಿರಾಗಿದೆ
ನಿನ್ನ ಮಾತು ಕತೆಯಾಗಿ,ನಿನ್ನ ನೋಟ ಚಿತ್ರವಾಗಿ
ಯೋಚನೆ ಮನದ ಮಾತಾಗಿ, ಹಳ್ಳಿಗರ ನುಡಿಯಾಗಿ
ನಿನ್ನ ಅಲೆದಾಟ ಉತ್ಸುಕತೆಯಾಗಿ
ನಿನ್ನ ಸಹಜತೆ ಸರಳತೆ ನಮ್ಮೆಲ್ಲರ ನರ ನಾಡಿಯ ಕಣಕಣದಲ್ಲಿ
ಉಳಿಯುವುದು ನಿಶ್ಚಿತ.
ಪೂರ್ಣಚಂದ್ರನಂತೆ ತೇಜಸ್ವಿಯಾಗಿ ಎಲ್ಲಕ್ಕಿಂತ ಮೇಲಾಗಿ
ನನ್ನ ಮಾನಸ ಗುರುವಾಗಿ ನೀ ಇರುವೆ ಶಾಶ್ವತ

-ಪ್ರೀತಿ,ನೋವು , ವಿಷಾದ, ಅಗಲಿಕೆ, ನಿರಾಸೆ, ಭಾವನೆಗಳ ಮಹಾಪೂರದೊಂದಿಗೆ
ನಿರಚಿತ