page1

Pages

Thursday, April 3, 2008

ಮುನಿಸು ತರವೇ ಮಳೆಯ ಮೇಲೆ?

"ಮಳೆ ಎಂದರೆ ಹಾಗೆ. ಮನಸ್ಸಿನಲ್ಲಿ ನೂರಾರು ಭಾವನೆಗಳ ಲಹರಿಯನ್ನು ತರುತ್ತದೆ. ಬಹುದಿನ ಕಾಲ ನನ್ನ ಬರವಣಿಗೆಗೆ ಬ್ರೇಕ್ ಹಾಕಿದ್ದು, ಪುನಃ ಬರೆಯಲು ಪ್ರೇರಣೆ ನೀಡುತ್ತಿರುವುದು ಈ ಮಳೆಯೇ"

"ಥೂ ಅನಿಷ್ಟ.. ಎಲ್ಲೇ ಹೋದರೂ ಹಾಳಾದ್ದು.. ಇದು ನನ್ನ ಬಿಡೋ ಹಾಗೆ ಕಾಣೋದಿಲ್ಲ. ಏನು ಪಿರಿಪಿರಿಯಪ್ಪಾ ಇದರದ್ದು" ಎಂದು ಬೆನ್ನಿಗಂಟಿದ್ದ ಮಕ್ಕಳನ್ನು ಗದುರುವಂತೆ ಗದರುತ್ತಾ ಕೊಡೆ ಮಡಚಿ ಒಳ ಬಂದ ನಂತರವೂ ಅವನ ಮಾತು ಮುಂದುವರೆದಿತ್ತು. ಇಲ್ಲದವರಿಗೆ ಅಭಾವ ವೈರಾಗ್ಯ, ಇದು ಒಂಥರಾ ಅಗಾಧ ವೈರಾಗ್ಯ" ಎನ್ನುತ್ತಾ ತಲೆ ಕೊಡವುತ್ತಾ ಅಜ್ಜನ ರೀತಿ ಕೂತ.

ಹೊಸಬರೂ ಯಾರೋ ಬಂದ್ರು ಈ ಮಳೇಲಿ ಎಂದುಕೊಳ್ಳುತ್ತಾ ನಾನು ಪಡಸಾಲೆಗೆ ಬಂದು ನೋಡಿದೆ. ಶಂಕರನ ಸ್ಥಿತಿ ಕಂಡು ನಗುತ್ತಾ ಹೇಳಿದೆ

'ಏನು ಇವತ್ತು ರಾಯರು ತುಂಬಾನೇ ಬೇಜಾರಲ್ಲಿರುವಂತಿದೆ" ಏನಾಯ್ತಪ್ಪ ಅಂತದ್ದು..

"ಬೇಜಾರಂತೆ ಬೇಜಾರು, ಬೆಂಗ್ಳೂರು ಬಿಟ್ಟಾಗ ಶುರುವಾಗಿದ್ದು. ಇಲ್ಲಿಗೆ ಬಂದು ಎರಡು ದಿನ ಆಯ್ತು ಇನ್ನು ನಿಂತಿಲ್ಲ. ನಿಲ್ಲೋ ಹಾಂಗೂ ಕಾಣಲ್ಲ ಬಿಡು. ನಾನು ಎಷ್ಟು ಮಳೆ ನೋಡಿಲ್ಲ. ಇದು ಯಾಕೋ ಸರಿಯಿಲ್ಲ. ಅಪ್ಪಯ್ಯ ಹೇಳ್ತಿದ್ದ ಈ ಅಕಾಲದ ಮಳೆ ನಮ್ಮನ್ನು ಹಾಳು ಮಾಡೋಕೆ ಬಂದಂತಿದೆ ಅಂತಾ"

ಅವನ ಧಾಟಿ ನೋಡಿದರೆ ೮೦ರ ಹರೆಯದ ನಮ್ಮಜ್ಜ ಮೈ ಮೇಲೆ ಬಂದಂತೆ ಕಾಣುತ್ತಿತ್ತು. ಅವನ ಬೆಂಗ್ಳೂರಿನ ಗೆಳೆಯರು ಮಳೆಯ ಬಗ್ಗೆ ದೂರುವ ಮಾತನ್ನು ಎಂದೂ ಆಡುತ್ತಿದ್ದ. ಆಗೆಲ್ಲಾ ಸುಮ್ಮನಿದ್ದೆ ಇವತ್ತು ಅವನನ್ನು ಕಿಚಾಯಿಸಲು ನಿರ್ಧರಿಸಿ ಹೇಳಿದೆ.

"ಅಕಾಲದ ಮಳೆ ನಿಜ ಆದರೆ ಹಾಳು ಮಾಡೋಕೆ ಅನ್ನೊದ್ದನ್ನಾ ನಾ ಒಪ್ಪಲ್ಲಬಿಡು" ಎಂದೆ..

ನನ್ನ ಉತ್ತರದಿಂದ ಸಂತುಷ್ಟಗೊಳ್ಳದೆ ಮುಂದುವರೆಸಿದ...

'ನೀನು ಬಿಡಕ್ಕ, ಯಾವಾಗಲೂ ಮಳೆ ಪರನೇ ದ್ವೀಪ ಫಿಲ್ಮಂ ನಲ್ಲಿನ ನಾಗಿ ಇದ್ದಂಗೆ, ಸದ್ಯಕ್ಕೆ ನಮ್ಮೂರಿಗೆ ನದಿ ಅಷ್ಟು ಹತ್ರಿಲ್ಲ ಪುಣ್ಯಕ್ಕೆ. ಕಡೆಗೆ ಎಲ್ಲಾ ನಮ್ಮ ಭೂತನಾಥನ ದಯೆ ಅನ್ನೋಕು ಯಾರಿಲ್ಲ ಎಂದು ಬದಲಿಗೆ' ನನ್ನೇ ಗೇಲಿ ಮಾಡತೊಡಗಿದ.

'ಹಾಂಗಲ್ಲ ನಾ ಹೇಳೋದು ಇಲ್ಲಿ ಕೇಳು ಮಳೆ ಬರುತ್ತೆ. ಹೋಗುತ್ತೆ. ಅದನ್ನು ಈಗ ಬಾ ಆಗ ಬಾ ಅಂತಾ ಹೇಳಿಕೆ ಕೊಟ್ಟು ಕರೀಲಿಕ್ಕೆ ಬರುತ್ತಾ ಹೇಳು. ಬಂದಾಗ ಅನುಭವಿಸಬೇಕು. ಎಲ್ಲಾ ಸರ್ತಿ ಮಳೆಯಿಂದ ಶುಭಾನೇ ಆಗುತ್ತೆ ಅಂದ್ರೆ ಹೇಗೆ, ಅಶುಭನೂ ಆಗುತ್ತೆ. ಅದಕ್ಕೆ ತಯಾರಿರಬೇಕು ಜೀವ. ಕಷ್ಟ, ಸಾವು ನೋವು ಹೇಗೆ ಹೇಳಿಕೇಳಿ ಬರೋದಿಲ್ಲ್ವೋ ಹಾಗೆ. ಅವು ಬರೋ ಸಮಯಕ್ಕೆ ನಾವು ತಯಾರಿರಬೇಕು ಅಷ್ಟೆ. ಎಷ್ಟು ಚೆಂದ ಉಂಟು ಮಳೆ. ಅದರ ರುಚಿನಾ ಆಸ್ವಾದಿಸಬೇಕು' ಅಂದೆ. ಜೋರಾಗಿ ನಗಾಡುತ್ತಾ...

'ಹಹ್ಹಹ್ಹಹ್ಹ. ರುಚಿ ಏನು ಬಂತು ಅಮಟೇ ಕಾಯಿ ತೊಟ್ಟು....ಮಳೆಯಿಂದ ಎಷ್ಟು ಊಟದ ಮನೆ ತಪ್ಪೋತು ಗೊತ್ತಾ' ಎಂದು ಮುಖ ಸಪ್ಪಗೆ ಮಾಡಿಕೊಂಡ.

ಹೋ.. ಹಾಗೇಳು ಮತ್ತೆ. ಛೆ ಪಾಪಾ. ಸರಿ ರುಚಿ ರುಚಿಯಾಗಿ ನಿಂಗೆ ಬೇಕಾದ್ದು ಮಾಡಿ ನಿನ್ನ ಹೊಟ್ಟೇನೇನೋ ತಂಪಾಗಿಸಬಹುದಪ್ಪಾ. ಆದ್ರೆ ನಿನ್ನ ಕಣ್ಣು ತಂಪಾಗಿಸೋಕೆ ಇಲ್ಲಿ ಯಾರನ್ನು ಕರೆತರೋದು ಗೊತ್ತಾಗುತ್ತಿಲ್ಲಪ್ಪ' ಎಂದು ನಕ್ಕೆ.

ಹೇ.. ನೀನೊಂದು... ಯಾವಾಗಲೂ ಕುಶಾಲು ನಿಂಗೆ.. ನಿಂಗೆ ಹಿರಿಯಪ್ಪ ರಚಿತ ಅಂತಾ ಹೆಸರಿಡೋ ಬದಲು ಕುಶಾಲಿ ಅಂಥಾ ಹೆಸರಿಡಬೇಕಿತ್ತು. ನಿಂಗೆ ಬೇಜಾರೇ ಆಗೋದಿಲ್ಲ ಕಾಣ್ದದೆ.

ಹ್ಞು...ಕಣಪ್ಪಾ ಹೆಸರು ಬದಲಿಸಿಬಿಡುವಾ ಬಿಡು..ತಡಿ ಬಂದೆ ಎಂದೇಳಿ ಒಳಹೋಗಿ...ಬಿಸಿಬಿಸಿ ಕಾಫಿ ತಂದು ಅವನ ಕೈಗಿತ್ತೆ.

ಹ್ಞಾ.. ಹೇಳೋದು ಮರೆತೆ ಮೊನ್ನೆ ಪೇಟೆಗೆ ಹೋಗಿದ್ದಾಗ.. ಮೇಗಿನ ಗದ್ದೆ ರಮೇಶ ಸಿಕ್ಕಿದ್ದ. ನಿನ್ನ ಗಳಸ್ಯ ಕಂಠಸ್ಯ...

'ಹೌದಾ..ಏನಂದಾ'

'ಅವನ ಜತೆ ಅವನ ತಂಗಿ ಸುರಜಾ ಇದ್ದಳು. ಊರಿಗೆ ಇವತ್ತೆ ಬಂದಿದ್ದು..ಮಳೆಯಿಂದ ಎಲ್ಲಿಗೂ ಕಾಲು ಬೆಳಸಲಿಲ್ಲ ಅಂಥಾ ಪೇಚಾಡುತ್ತಿದ್ದಳು ಪಾಪಾ

'ಹೌದಾ...ಏನಂದ್ಳು 'ಎಂದವನು ನಾಲಿಗೆ ಕಚ್ಚಿಕೊಂಡ...ಕುಡಿಯುತ್ತಿದ್ದ ಕಾಫಿ ಅನ್ನು ಚೆಲ್ಲಿಕೊಳ್ಳುತ್ತಾ...

ನನ್ನ ನಗು ಹೆಚ್ಚಾಯಿತು..

'ಸರಿ ಮಾರಾಯ್ತಿ ಇಲ್ಲೆ ಇದ್ದರೇ ಕಿಚಾಯಿಸ್ತಾನೇ ಇರುತ್ತೀಯಾ. ನಾನು ತೋಟಕ್ಕೆ ಕಡೆ ಹೋಗ್ತೀನಿ. ಹಿರಿಯಪ್ಪ ಸಿಗಬಹುದು ಅಲ್ಲಿ ಎಂದು ಎದ್ದು ನಿಂತ. ಕುಡಿದ ಕಾಫಿ ಲೋಟ ಬದಿಗಿಟ್ಟು.ಅಂಗಳಕ್ಕೆ ಜಿಗಿದ ನಡೆದ.

ಅವನು ಕೊಡೆ ಬಿಡಿಸಿ ಅಂಗಳಕ್ಕೆ ಹಾರಿದ ಅವನಿಗೆ ಹಳ್ಳದ ನೀರು ಹೆಚ್ಚಾಗಿದೆಯಂತೆ.. ಹುಷಾರು ಎನ್ನುತ್ತಾ...ಅವನು ನಡೆದ ಹಾದಿ ನೋಡುತ್ತಾ ನೆನಪಿನಾಳಕ್ಕೆ ಇಳಿದೆ......

ಮುಂದುವರೆದು.....ಮಳೆ ನಿಲ್ಲದೇ ಮನದಿ ನೂರಾರು ಲಹರಿ ಮೂಡಿಸಿದೆ ..

1 comment:

Anveshi said...

ದೋಣಿಯಲ್ಲೇ ಬಂದೆ... ಆದ್ರೆ ಇಲ್ಲಿ ನೋಡಿದ್ರೆ... ಜೋರಾಗಿ ಮುಂಗಾರು ಅಲ್ಲಲ್ಲ.... ಹಿಂಗಾರು ಮಳೆ!

ಬ್ಲಾಗು ತುಂಬಾ ಮಳೆ.... ಹಚ್ಚ ಹಸಿರಿನ ಪೈರು...

ಈ ಮಳೆತಾಣಕ್ಕೆ ಬಂದು ಒಂದು ಸಾರಿ ಬಿಸಿಯಾದ ತಲೆ ತಣ್ಣಗೆ ಮಾಡಿಕೊಂಡು ತೆರಳಬಹುದು...

ನಿ.ರಚಿತ ವಿರಚಿತ ಮಳೆ ಕುರಿತ ಬರಹ ಮನಸು ತೋಯಿಸಿತು.