page1

Pages

Saturday, April 14, 2007

ಎಲ್ಲಿ ಹೋದೆ ನನ್ನ ಗುರುವೇ, ಓ ನನ್ನ ತೇಜಸ್ವಿ


ಎಲ್ಲಿ ಹೋದೆ ನನ್ನ ಗುರುವೇ ....

ಮೂಡಿಗೆರೆಯ ನೀನೇಕೆ ತೊರೆದೆ
ಮಲೆನಾಡನು ಬಿಟ್ಟು ನೀ ಹೇಗಿರುವೆ
ಮಲೆನಾಡಿನ ಮಾಯಾವಿ ನಿನ್ನಂತೋರೊ ಬಲು ವಿರಳ
ಅದು ಹೇಗಿದ್ದೆ ನೀನಷ್ಟು ಸರಳ
ರಸಋಷಿಯ ಪುತ್ರನೆ.. . .

ನಮಗೆ ಜೀವರಸವ ನೀಡಿದವನೆ
ವನರಾಶಿಯ ರಹಸ್ಯ ಬೇಧಿಸಿದ ಚಿದಂಬರನೆ
ಮರ್ಮಕ್ಕೆ ತಾಕುವಂತೆ ಕುಟುಕುತ್ತಿದ್ದ ಕರ್ವಾಲೋವೆ
ಕಿವಿ ನಿನ್ನ ಹುಡುಕುತ್ತಿದೆ....

ಕರಿಯಣ್ಣ ಮಾಡಿದ ಬಿರಿಯಾನಿ ಆರುತ್ತಿದೆ ಬೇಗ ಬಾ...
ಮುಸ್ಸಂಜೆಯಲ್ಲಿ ಕಿರುಗೂರಿಗೆ ಹೋಗೋಣ ಬಾ
ಖುದ್ದೂಸ್ಸನ ಎಕ್ಸ್ ಪ್ರೆಸ್ ಹತ್ತಿ ಜುಗಾರಿ ಕ್ರಾಸ್ ನಲ್ಲಿ ಇಳಿಯೋಣ
ನೀನಿರದೆ ಅಬಚೂರು ಚೂರಾಗಿದೆ ..

ಅಣ್ಣನ ನೆನಪು ಹೇಳು ಬಾ.. ಮಂದಣ್ಣ ಕಾದು ಕುಂತವ್ನೆ
ನಿನಗಾಗಿ ತಬರ ಕಾದಿದ್ದಾನೆ, ಕುಬಿ ಇಯಾಲ ಬಂದಿದ್ದಾರೆ
ಇನ್ನೇಕೆ ತಡ.... ಬಾ ನನ್ನ ಗುರುವೇ

ಹಕ್ಕಿಗಳ ಗಾಯನ, ಕಾನನದ ಮೌನ ನಿನ್ನೊಂದಿಗೆ ಲೀನವಾಗಿದೆ.
ತೇಜಸ್ವಿ ನಿನ್ನ ಮಾಯಾಲೋಕದಲ್ಲಿ ಸುತ್ತುವೆ ಅನವರತ
ಜಗವಿರುವವರೆಗೂ, ಹಸಿರಿರುವವರೆಗೂ ನೆನಪಲ್ಲಿ ನೀ ಉಳಿಯುವೆ ಶಾಶ್ವತ

ನಿಗೂಢ ಮನುಷ್ಯ ನಿನ್ನಿಂದ ಸಹಜ ಕೃಷಿಯ ಕಲಿಯುವ ಆಸೆ
ನಿನ್ನ ಪರಿಸರದ ಹಕ್ಕಿಗಳ ಕಥೆ ಕೇಳುವಾಸೆ
ಮರಳಿ ಬಾ... ನನ್ನ ಗುರುವೇ

ಪೂರ್ಣಚಂದ್ರ ನಿನಗಾಗಿ ಮೂಡಿಗೆರೆ ಕಾದಿದೆ
ನಿನ್ನೊಡಲಿಲ್ಲದಿದ್ದರೂ ನಿನ್ನ ಉಸಿರು ಹಸಿರಾಗಿದೆ
ನಿನ್ನ ಮಾತು ಕತೆಯಾಗಿ,ನಿನ್ನ ನೋಟ ಚಿತ್ರವಾಗಿ
ಯೋಚನೆ ಮನದ ಮಾತಾಗಿ, ಹಳ್ಳಿಗರ ನುಡಿಯಾಗಿ
ನಿನ್ನ ಅಲೆದಾಟ ಉತ್ಸುಕತೆಯಾಗಿ
ನಿನ್ನ ಸಹಜತೆ ಸರಳತೆ ನಮ್ಮೆಲ್ಲರ ನರ ನಾಡಿಯ ಕಣಕಣದಲ್ಲಿ
ಉಳಿಯುವುದು ನಿಶ್ಚಿತ.
ಪೂರ್ಣಚಂದ್ರನಂತೆ ತೇಜಸ್ವಿಯಾಗಿ ಎಲ್ಲಕ್ಕಿಂತ ಮೇಲಾಗಿ
ನನ್ನ ಮಾನಸ ಗುರುವಾಗಿ ನೀ ಇರುವೆ ಶಾಶ್ವತ

-ಪ್ರೀತಿ,ನೋವು , ವಿಷಾದ, ಅಗಲಿಕೆ, ನಿರಾಸೆ, ಭಾವನೆಗಳ ಮಹಾಪೂರದೊಂದಿಗೆ
ನಿರಚಿತ

Friday, April 13, 2007

ಮಳೆ ನಿಲ್ಲದೇ

ಸುರಿಯುತ್ತಿದೆ ಮಳೆ ಇಲ್ಲಿ
ಗುಡುಗು ಮಿಂಚಿನ ತಾಳದ ಜೊತೆಗೆ
ತೊಯ್ಯುತ್ತಿದೆ ಮನವು ನೋವು ನಲಿವಿನ ಈಚೆಗೆ
ಯಾರ ಬೇಡಿಕೆಗೋ ಬೇಡದ ಮಳೆ ಸುರಿಯುತ್ತಿದೆ
ವೈಶಾಖದ ದಿನದಿ ಆಷಾಢವ ನೆನಪಿಸುತ್ತಿದೆ
ಸೋನೆ ಮಳೆ ಹೋಗಿ ಚಂಡಿ ಹಿಡಿದಂತೆ ಆಡುತ್ತಿದೆ,

ಸುರಿವ ಮಳೇ ಹರಿದಿರುವ ಕಣ್ಣೀರ ಮರೆಮಾಚಿದೆ
ಮೌನದಿ ಸುಳಿದ ಯಾವುದೊ ಸವಿನೆನಪು ಮತ್ತೆ ನಗೆ ತರಿಸಿದೆ
ವಿಷಾದದ ನಗೆಯ ಹಿಂದೆ ನೋವಿನ ಛಾಯೆ
ಹನಿ ಹನಿ ಧರೆಗಿಳಿದು ಮೂಡಿಸಿದೆ ಎನೋ ಮಾಯೆ
ನೋವು ನಲಿವಿನ ವರ್ಷಧಾರೆ ಹನಿ ಹನಿಯಾಗಿ ಕವನವಾಗಿದೆ
ಸುರಿಯುತ್ತಿದ್ದ ಮಳೆ ನಿಂತಿದೆ ಇಲ್ಲಿ

Sunday, April 8, 2007

ಮೌನ

ಅಂತರಂಗ ಹಾಡುತ್ತಿತ್ತು ನಿನ್ನಯ ಗಾನ
ಸ್ವರ ತಪ್ಪಿರಬೇಕು ಹಾಗಾಗಿ ನೆಲೆಸಿದೆ ಮೌನ
ಇನಿದನಿಯಿಂದ ಮೂಡುತ್ತಿತ್ತು ಸ್ವರ ಸಿಂಚನ
ಬತ್ತಿ ಹೋಗಿದೆ ಇಂದು ನನ್ನ ಆಲಾಪನ