page1

Pages

Wednesday, March 28, 2012

ಬದುಕು ಎಂಬ ಮಾಯೆ

ಏನನ್ನೋ ಗೀಚುವುದರ ಬದಲು ಸುಮ್ಮನ್ನಿದ್ದು ಖಾಲಿ ಹಾಳೆಯ ಮರ್ಯಾದೆ ಉಳಿಸುವುದು ಮೇಲು ಎಂದೆನಿಸಿತ್ತು..ಹಾಗಾಗಿ ಕಳೆದ ಆರು ತಿಂಗಳಿನಿಂದ ಒಂದು ಅಕ್ಷರ ಕೂಡ ಹುಟ್ಟಲಿಲ್ಲ .. ಹುಟ್ಟಿದ್ದು ಈ ಬ್ಲಾಗ್ ಪುಟ ಸೇರಲಿಲ್ಲ...

ಅರ್ಥವಿಲ್ಲದ ವ್ಯರ್ಥಪ್ರಲಾಪದ ಮಾತುಗಳನ್ನು ಬರಿದೇ ಪೋಣಿಸುತ್ತಾ ಹೋದರೆ ನನ್ನೂರಿನಿಂದ ರಾಜಧಾನಿ ತಲುಪಬಹುದಿತ್ತು. ಅಲ್ಲಿಂದ ಮತ್ತೆ ವೆಬ್ ಪುಟ ಸೇರಿ ಎಲ್ಲೆಡೆ ಹರಡಬಹುದಿತ್ತು. ಆದರೆ, ಯಾಕೋ ಏನನ್ನೂ ಬರೆಯುವ ಮನಸ್ಥಿತಿ ನನ್ನಲಿರಲಿಲ್ಲ. ನನಗ್ಯಾವ ಕಾಯಿಲೆಯೂ ಬಂದಿರಲಿಲ್ಲ ಎಂದರೆ ಅದು ದೈಹಿಕ ಯಾತನೆಯ ಬಗ್ಗೆ ಮಾತ್ರ ಹೇಳಿದ್ದಂತಾಗುತ್ತದೆ.

ಮಾನಸಿಕವಾಗಿ ಕಳೆದ ಆರು ತಿಂಗಳಿನಲ್ಲಿ ಸಾಕಷ್ಟು ಜರ್ಝರಿತಗೊಂಡಿದ್ದೇನೆ. ಎಂದೂ ಅಳದ ಕೂಸಿನ ಕಣ್ಣಲ್ಲಿ ನಾಲ್ಕು ಹನಿ ಕಂಡ ಅಪ್ಪ ಕೂಡಾ ಕೊಂಚ ಗಾಬರಿಯಾಗಿದ್ದರು. ಆಪ್ತರ ಅಗಲಿಕೆಯ ನೋವಿನಲ್ಲಿದ್ದ ನಾನು.. ನಾನು ನಾನಾಗಿ ಮತ್ತೆ ರೂಪುಗೊಳ್ಳಲು ಎರಡು ಋತುಗಳೇ ಬೇಕಾಯಿತು..

ಏನಾಗಿತ್ತು ನನಗೆ? ನಾನ್ಯಾಕೆ ಎಲ್ಲವನ್ನು ತೊರೆದರೂ ಎಲ್ಲವನ್ನು ನನ್ನದೆಂಬಂತೆ ಆಡಿ ಅಪಹಾಸ್ಯಕ್ಕೀಡಾದೆ ಗೊತ್ತಿಲ್ಲ...

Tuesday, September 27, 2011

ರಮಣ ನಿನ್ನಿಂದ ಮನಸ್ಸು ಮೆದು ಹರಣ

ನಿಶಾಂತನ ಜೊತೆ ಪ್ರಶಾಂತವಾಗಿದ್ದ ಮನಸ್ಸಿನೊಳಗೆ ಕೊಂಚ ರಭಸವಾಗೇ ಎಂಟ್ರಿ ಕೊಟ್ಟಿದ್ದು ರಮಣ ಪ್ರಕಾಶ್. ಮುಂಬೈನಲ್ಲಿದ್ದ ಆತ ಪರಿಚಯವಾಗಿದ್ದು, ಆತನ ಪತ್ನಿ ರಚನಾ ಮೂಲಕ. ತೇಜಸ್ವಿ ಅವರ ಪುಸ್ತಕ ಅರಸುತ್ತಿದ್ದ ರಚನಾ ಆರ್ಕುಟ್ ನಲ್ಲಿ ಈ ಬಗ್ಗೆ ಹಾಕಿದ್ದ ಪೋಸ್ಟ್ ನೋಡಿ ನಾನು ಉತ್ತರಿಸಿದ್ದೆ ಬಂತು.

ರಚನಾ ಜೊತೆ ಗೆಳೆತನ ಬೆಳೆಯಿತು. ನಂತರ ರಚನಾ ರಮಣನ ಪರಿಚಯವಾಗಿ ಆತನಿಗೂ ಕಂಪ್ಯೂಟರ್ ನಲ್ಲಿ ಕನ್ನಡ, ತೇಜಸ್ವಿ ಪುಸ್ತಕ, ಕವಿ, ಕವನ ಬಗ್ಗೆ ಸಮಾನ ಆಸಕ್ತಿ ಇದ್ದ ಪರಿಣಾಮ ರಮಣ ಇಷ್ಟವಾದ. ನನ್ನ ಪತಿ ಕನ್ನಡ, ಕವನ, ಪುಸ್ತಕಗಳ ಹುಚ್ಚು ಬಿಡಿಸಿ ಎಂದು ಗೆಳೆತನದ ಕೊಂಡಿ ಹಾಕಿಕೊಟ್ಟ ಗೆಳತಿ ರಚನಾಳಿಗಿಂತ ತುಸು ಹೆಚ್ಚು ಆಪ್ತವಾಗಿ ರಮಣ ಹತ್ತಿರವಾಗಿದ್ದ.

ನಿಶಾಂತನಂತೆ ರಮಣ ಕೂಡಾ ಕವನಧಾರೆ ಹರಿಸುತ್ತಿದ್ದ. ನಿಶಾಂತನ ಕವನಗಳು ವಿರಹ ರಾಗ ಹಾಡಿದರೆ, ರಮಣನದ್ದು ಎಲ್ಲದರಲ್ಲೂ ಆಶಾಭಾವನೆ. ರಮಣ, ರಚನಾ ದಂಪತಿಗಳಿಗೆ ಇದ್ದ ಏಕೈಕ ಕೂಸು ಅಲ್ಲಮ. ಹೆಸರು ಸ್ವಲ್ಪ ವಿಚಿತ್ರ ಎನಿಸಿತ್ತು ಮೊದಲಬಾರಿ ಕೇಳಿದಾಗ ಆದರೆ, ಅಲ್ಲಮ ಚುರುಕಾದ ಹುಡುಗ, ಆದರೆ, ತಲೆಯಲ್ಲಿ ಎಲ್ಲಾ ಪುಟ್ಟ ಮಕ್ಕಳಂತೆ ಪ್ರಶ್ನೆಗಳ ಮೂಟೆಗಳನ್ನೇ ಹೊತ್ತಿರುತ್ತಿದ್ದ.

ಅಲ್ಲಮನನ್ನು ಕರೆದುಕೊಂಡು ರಮಣ ಒಮ್ಮೆ ನಮ್ಮೂರು, ನಮ್ಮ ಮನೆಗೂ ಬಂದಿದ್ದರು. ಕೋಮಲಾಳಿಗೆ ಅವರ ಊರಿನ ಕಡೆಯವರು ಎಂದು ತಿಳಿದು ವಿಶೇಷವಾಗಿ ಮಾತನಾಡಿಸುತ್ತಿದ್ದಳು. ನಾಗರಪಂಚಮಿ ಸಮಯದ ಅಣ್ಣ ತಂಗಿ ಮಾಡೆಲ್ ಥರಾ ಕಾಣುತ್ತಿದ್ದರು ಅವರಿಬ್ಬರು ನನಗೆ. ಅಲ್ಲಮನ ಓದುವ ಉತ್ಸಾಹ, ಆಟ ಆಡುವ ಹುಚ್ಚನ್ನು ನಾನಂತೂ ತೀರಿಸಲು ಸಾಧ್ಯವಿರಲಿಲ್ಲ. ಊರಿಗೆ ಬಂದಿದ್ದ ತಮ್ಮ ಕಿಟ್ಟಿಗೆ ಅವನನ್ನು ಒಪ್ಪಿಸಿ, ರಮಣನ ಜೊತೆ ಹರಟುತ್ತಿದ್ದೆ.

ರಮಣನನ್ನು ಒಮ್ಮೆ ಮೇಲಿಂದ ಕೆಳಗೆ ನೋಡಿದೆ, ನಿಶಾಂತನ ರೂಪು ಇಲ್ಲದಿದ್ದರೂ, ಒಳ್ಳೆ ಹೇರ್ ಸ್ಟೈಲ್ ಇಲ್ಲದಿದ್ದರೂ ನಿಶಾಂತನಿಗಿಂತ ಹೆಚ್ಚು ವಾಚಾಳಿ. ತಗ್ಗಿ ಬಗ್ಗುವ ವ್ಯಕ್ತಿತ್ವ ಎನಿಸಿತು. ರಮಣನ ಫ್ಯಾಮೀಲಿ ಮ್ಯಾಟರ್‍ ಎಲ್ಲ ನನ್ನ ತಲೆಲಿತ್ತು. ಮೊದಲ ಭೇಟಿಯಲ್ಲಿ ಮಾತಿಗಿಂತ ಮೌನವೇ ಹೆಚ್ಚಾಗಿತ್ತು.

ಆದರೆ, ನಂತರ ಪಸರ್ನಲ್ ಮ್ಯಾಟರ್ ಎಲ್ಲಾ ವಿನಿಮಯವಾಗುತ್ತಿತ್ತು. ರಮಣ ಸ್ವಲ್ಪ ಜಾಸ್ತಿನೇ ಪೊಸೆಸಿವ್
ಅಂಥಾ ಅನ್ನಿಸತೊಡಗಿತು. ರಮಣನ ಜೊತೆ ಗೆಳೆತನದ ಬಗ್ಗೆ ನಿಶಾಂತನಿಗೆ ವಿವರವಾಗಿ ಹೇಳೋಕೆ ಆಗಿರಲಿಲ್ಲ. ಹೊಸ ಗೆಳೆಯರ ಬಗ್ಗೆ ಸ್ವಲ್ಪ ಹುಶಾರು ಎಂದಿದ್ದು ಮಾತ್ರ ಅರೆಕ್ಷಣ ಮಾತ್ರ ನೆನಪಿರುತ್ತಿತ್ತು.

ಹರಕೆಯ ಕುರಿಯಂತೆ ಎಲ್ಲರ ಸಮಸ್ಯೆ ಬಗೆಹರಿಸುವಂತೆ ಮುಂದೆ ನಿಲ್ಲುತ್ತಿದ್ದ ನಾನು ಅನೇಕ ಬಾರಿ ಬೆಸ್ತು ಬಿದ್ದಿದ್ದು ಇದೆ. ಅದು ಹುಟ್ಟಿನಿಂದ ಬಂದ ಸಮಸ್ಯೆ ಎಂದು ನಕ್ಕು ಸುಮ್ಮನಾಗುತ್ತಾನೆ ಅಷ್ಟೆ.

ರಮಣನ ಜೊತೆ ಚಾಟಿಂಗ್, ಮೆಸೇಜಿಂಗ್ ನಡೆದಿತ್ತು. ಉದ್ದುದ್ದಾ ಕವನಗಳನ್ನು ಕಳಿಸಿ ಕೊನೆಗೆ ಹೇಗಿದೆ ಡಿಯರ್ ಎಂದಾಗಲೆಲ್ಲಾ ಕಷ್ಟಪಟ್ಟು ಸಹಿಸಿಕೊಂಡಿದೆ. ಆದರೆ ಒಂದು ದಿನ ತೀರಾ ಹತ್ತಿರವಾಗಿ ಕೂತು ಹರಟುತ್ತಿದ್ದ ವೇಳೆ ಕೆನ್ನೆಗೆ ತುಟಿ ತಾಗಿಸಿ ಬಿಟ್ಟ.

ಮಾರ್ಡ್ರನ್ ಲೈಫ್ ಸ್ಟೈಲ್ ನ ಒಳಹೊರಗೂ ತಿಳಿದಿದ್ದ ರಮಣನಿಗೂ ಇದು ಸಹಜವಾಗಿತ್ತು. ಆದ್ರೆ ನನಗೆ ಒಂದು ಕ್ಷಣ ಏನೂ ತೋಚದಂತಾಯಿತು. ಕೆಲವೊಮ್ಮೆ ನಾನ್ ವೆಜ್ ಜೋಕ್ಸ್ ಹದ್ದು ಮೀರದಂತೆ ಸಂಭಾಷಣೆ ಮಧ್ಯೆ ಸುಳಿಯುತ್ತಿತ್ತು.

ನಾನಾದರೋ ರಮಣನನ್ನು ಬಿಟ್ಟರೆ ಬೇರೆ ಆಪ್ತ ಗೆಳೆಯರಿಲ್ಲ ಎಂಬಂತೆ ಆಡುತ್ತಿದ್ದೆ. ಇದು ಕೆಲವೊಮ್ಮೆ ನನ್ನ ಕಸಿನ್ಸ್ ಗಳಿಗೂ ಇರುಸು ಮುರುಸು ತರಿಸಿತ್ತು. ರಮಣನ ಜೊತೆ ಆಗಾಗ ಕಿತ್ತಾಟ ನಡೆಯುತ್ತಿತ್ತು.

ರಮಣ ಎಲ್ಲವನ್ನೂ ಎಕ್ಸ್ ಪ್ರೆಸಿವ್ ಆಗಿರಬೇಕು ಎಂದು ಬಯಸುತ್ತಿದ್ದ. ತುಂಬಾ ಪೊಸೆಸಿವ್ ಆಗಿರುತ್ತಿದ್ದ. ಅದರೆ, ಸ್ನೇಹಿತರೆಂದರೆ ಪ್ರೊಟೆಕ್ಟಿವ್ ಆಗಿ ಹೆಲ್ಪ್ ಫುಲ್ ಆಗಿರುತ್ತಿದ್ದ. ಆದರೆ, ಯಾವುದೇ ಸರ್ಕಲ್ ಗೆ ಒಳಪಡದೆ ಇದ್ದ ನಾನು ನನಗೆ ತಿಳಿಯದಂತೆ ರಮಣನ ಗೆಳೆತನದ ಸರ್ಕಲ್ ನಲ್ಲಿ ಸೇರಿ ಹೊರ ಬರಲಾರದೆ ಒದ್ದಾಡುತ್ತಿದೆ.

ಕೊನೆಗೂ ರಮಣನ ಅತಿಯಾದ ಗೆಳೆತನದಿಂದ ಮುಕ್ತಿ ಪಡೆವ ಮಾರ್ಗ ಸಿಕ್ಕಿಬಿಟ್ಟಿತ್ತು. ದೂರದ ಊರಿಗೆ ಪ್ರವಾಸಕ್ಕೆಂದು ಹೋದ ನಾನು ಕೊನೆಗೆ ಅಲ್ಲೇ ನೆಲೆಗೊಳ್ಳುವಂತಾಯಿತು. ಈ ನಡುವೆ ರಮಣನ ಜೊತೆ ಸಂಪರ್ಕವನ್ನು ನಿಧಾನವಾಗಿ ಕಡಿದುಕೊಳ್ಳುತ್ತಾ ಬಂದೆ.

ಆದರೆ, ಫ್ರೆಂಡ್ ಶಿಪ್ ಬ್ರೇಕ್ ಮಾಡಿಕೊಳ್ಳಲಿಲ್ಲ. ಯಾವ ಮನುಷ್ಯನಾದರೂ ದ್ವೇಷ ಕಟ್ಟಿಕೊಳ್ಳಬೇಡ. ಯಾರಿಗೊತ್ತು ಯಾರು ಯಾವಾಗ ಬೇಕಾಗುತ್ತಾರೋ ಗೊತ್ತಿರುವುದಿಲ್ಲ ಎಂಬ ಆಪ್ತರೊಬ್ಬರ ಮಾತಿಗೆ ಬೆಲೆಕೊಟ್ಟು ಎಲ್ಲರೊಡನೆ ಸ್ನೇಹ ಉಳಿಸಿಕೊಂಡು ಸಾಗಿಸುತ್ತಿದ್ದೇನೆ ಜೀವನ.... ಸದಾ ಮಳೆ ಸುರಿವ ನಾಡಿನಲ್ಲಿ...


Saturday, July 30, 2011

ನಿಶಾಂತ ಬಳಿ ಇದ್ದರೆ ಮನಸಿಗೆ ಪ್ರಶಾಂತ

ನನದಲ್ಲದ ಕಾರಣಕ್ಕೆ ನಾನು ಕೆಲಸ ತೊರೆದ ಮೇಲೆ ಮನೆಯಲ್ಲಿ ಸಮಯದೂಡುವುದೇ ಕಷ್ಟವಾಗುತ್ತಿತ್ತು,. ಇಂಥ ಸಂದರ್ಭದಲ್ಲಿ ಸಿಕ್ಕವನು ನಿಶಾಂತ. ಅವನೆಂದರೆ ನನಗಷ್ಟೆ ಅಲ್ಲಾ ನನ್ನ ಗೆಳತಿಯರಿಗೂ ಏನೋ ಆಕರ್ಷಣೆ.

ಸೊಂಪಾಗಿ ಬೆಳೆದಿದ್ದ ತಲೆಕೂದಲನ್ನು ಹಿಂದಕ್ಕೆ ಹಾಕುತ್ತಾ ಹೇರ್ ಸ್ಟೈಲ್ ಸರಿ ಮಾಡಿಕೊಂಡು, ಗಡಸು ಧ್ವನಿಯಲ್ಲಿ ಅವನು ಸ್ವರಚಿತ ಗೀತೆಗಳ ಹಾಡುತ್ತಿದ್ದರೆ, ಎಲ್ಲರೂ ಮರುಳಾಗಿಬಿಡುತ್ತಿದ್ದರು. ಆದರೆ, ಅವನೇನೂ ಯಾರೊಂದಿಗೂ ಫ್ಲರ್ಟ್ ಮಾಡಿದವನಲ್ಲ.


ತನ್ನ ವೃತ್ತಿ, ಸಾಹಿತ್ಯ ಲೋಕವನ್ನು ಇಷ್ಟಪಡುವ ನಿಶಾಂತ ಎಲ್ಲರೊಡನೆ ಬೆರತರೂ ಸದಾ ಏಕಾಂಗಿಯಾಗಿ ಕಾಣುತ್ತಿದ್ದ. ಅವನೊಂದಿಗೆ ದಿನವಿಡೀ ಹರಟೆ ಹೊಡೆಯುವುದು ಈಗಲೂ ನನ್ನ ನೆಚ್ಚಿನ ವಿಷಯ. ನಮ್ಮ ಮಾತುಕತೆಯಲ್ಲಿ ಇಡೀ ವಿಶ್ವದ ಆಗು ಹೋಗುಗಳು ಆವರಿಸಿರುತ್ತಿತ್ತು.

ಮಲ್ಲಿಕಾಳ ಮೈಮಾಟದಿಂದ ಹಿಡಿದು ಶಂಕರರ ಅದ್ವೈತ, ಶಿಕ್ಷಣ ಪದ್ಧತಿ, ಬೇಂದ್ರೆ ಕವನ, ಕುವೆಂಪು ಕಥನ, ಕಾರಂತರ ಸುತ್ತಾಟ, ತೇಜಸ್ವಿ ಜೀವನ ಸರಸ ಎಲ್ಲವೂ ಸುಳಿದಾಡುತ್ತಿತ್ತು. ಒಟ್ಟಿನಲ್ಲಿ ಅವನೊಟ್ಟಿಗೆ ಮಾತಾಡುತ್ತಾ ದಿನಕ್ಕೊಂದು ಹೊಸ ವಿಷಯವನ್ನು ಗ್ರಹಿಸುವುದು ನನಗೆ ಇಂದಿಗೂ ಖುಷಿ ಕೊಡುತ್ತದೆ.

ನಿಶಾಂತ ಹಾಗೂ ನನ್ನ ಗೆಳೆತನ ಹಲವರ ಕಣ್ಣು ಕುಕ್ಕುತ್ತಿತ್ತು. ನಿಶಾಂತನನ್ನು ನನಗೆ ಪರಿಚಯಿಸಿದ ನಮ್ಮ ಸಹಕಾರ ಸಂಘದ ಅಧ್ಯಕ್ಷ ಮಿತ್ರ ಸುರೇಶ್ ನಾಯಕ ಕೂಡಾ ಅವನು ಸರಿಯಿಲ್ಲ ಎಂದು ಏನೇನೋ ಹೇಳಿದ್ದ. ನನ್ನ ಗೆಳತಿ ಕೋಮಲಾಳಿಗೂ ಕೂಡಾ ನಿಶಾಂತ ನಿನ್ನ ಮಾತ್ರ ಮಾತಾಡಿಸುತ್ತಾನೆ ಬರೀ. ನಾವೆಂಥ ಮಾಡಿದ್ದೀವಿ ಮಾರ್ರಾಯ್ತಿ ಎಂದು ಗೊಣಗುತ್ತಿದ್ದಳು.


ಮೊಬೈಲ್ ಕಾಣದ ಆ ದಿನಗಳಲ್ಲಿ ನಿಶಾಂತನ ದೆಸೆಯಿಂದ ಮೊಬೈಲ್, ಮೆಸೇಂಜಿಂಗ್ , ಟಾಕಿಂಗ್ ಎಲ್ಲವೂ ವೇದ್ಯವಾಯಿತು. ಮೊಬೈಲ್ ಬಿಲ್ ಕೂಡಾ ಅವನೇ ಕಟ್ಟುತ್ತಿದ್ದ. ಕೆಲವೊಮ್ಮೆ ನಿಶಾಂತ ಮಾತಿಗಿಂತ ಹೆಚ್ಚು ಮೌನಕ್ಕೆ ಶರಣಾಗುತ್ತಿದ್ದ. ಹುಡುಗರೂ ಈ ರೀತಿ ವೇದನೆ ಪಡುತ್ತಾರಾ ಎಂದೆನಿಸಿಬಿಡುತ್ತಿತ್ತು. ಕಾಲೇಜು ದಿನಗಳಿಂದ ಹಿಡಿದು ಇಂದಿನ ವರೆಗಿನ ಆತನ ಪ್ರೇಮ ಪ್ರಕರಣಗಳನ್ನು ಒಂದೊಂದಾಗಿ ಹೇಳತೊಡಗಿದ್ದ.

ಇವನ ಹಿಂದೆ ಬಿದ್ದ ಹುಡುಗಿಯರ ಪಟ್ಟಿ ಅವರ ಬೇಡಿಕೆಗಳು, ಜೀವನದ ಅರ್ಥ ಗೊತ್ತುಗುರಿಯಿಲ್ಲದ ಇಂದಿನ ಪ್ರೇಮಿಗಳ ಬಗ್ಗೆ ಗಂಟೆಗಟ್ಟಲೆ ಹೇಳುತ್ತಿದ್ದ. ನನಗೋ ಇವೆಲ್ಲವೂ ಹೊಸ ಕಥೆಗಳು ಆಸಕ್ತಿಯಿಂದ ಕೇಳುತ್ತಿದ್ದೆ. ಆಗಾಗ ಇದಕ್ಕೆ ಏನು ಪರಿಹಾರ ಎನ್ನುತ್ತಿದ್ದ.. ನಾನೇನು ಹೇಳಲಿ.. ನನ್ನದೋ ಬರೀ ಪುಸ್ತಕ ಜ್ಞಾನ. ಕೆಲವೊಮ್ಮೆ ಅವನು ಪ್ರಶ್ನೆ ಮೇಲೆ ಪ್ರಶ್ನೆ ಎಸೆಯುತ್ತಿದ್ದರೆ ನನಗೆ ಏನು ಹೇಳಲು ತೋಚುತ್ತಿರಲಿಲ್ಲ.

ಒಂದು ದಿನ ಬಂದವನೇ ಮತ್ತೆ ಮುಂದೆ ಏನು ಯೋಚ್ನೆ ಮಾಡಿದ್ದೀಯಾ? ಅಂದಾ.. ನಾನು ಕೇಳ್ದೆ ಯಾವುದರ ಬಗ್ಗೆ ಜೀವನದ ಬಗ್ಗೆ.. ಮದ್ವೆನಾ ಅಥವಾ ಕೆಲಸನಾ ಮದ್ವೆ ಬಗ್ಗೆ ಮನಸ್ಸಿಲ್ಲ.. ಕೆಲಸ ಮಾಡ್ಬೇಕು ಆಂದ್ರೆ ಹಳೆ ಫೀಲ್ಡ್ ಬೇಡ ಅಂದೆ ಆಯ್ತು ಎಂದು ತನ್ನ ಬೈಕ್ ಹತ್ತಿ ಹೊರಟುಬಿಟ್ಟ.

ವಾರದೊಳಗೆ ನನಗೊಂದು ಕೆಲ್ಸ ಸಿಕ್ಕಿತ್ತು. ಅದು ನನ್ನ ನೆಚ್ಚಿನ ಕ್ಷೇತ್ರದಲ್ಲೇ.. ಕೃಷಿ ಇಲಾಖೆ ಸಂಶೋಧನೆ..ನಮ್ಮೂರಿನಿಂದ ಮೂರ್ನಾಲ್ಕು ಗಂಟೆ ಹಾದಿ ಮನಸ್ಸು ಹರುಷದಿಂದ ಹಾರಾಡುತ್ತಿತ್ತು.

ನಿಶಾಂತನ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಆಸೆ ಹುಟ್ಟಿಕೊಂಡಿತ್ತು. ಆದರೆ, ಎಲ್ಲಾ ಸ್ತರದಲ್ಲೂ ನನಗಿಂತ ಒಂದು ಹೆಜ್ಜೆ ಮುಂದಿದ್ದ ಅವನಿಗೆ ನಾನು ಏನು ತಾನೇ ನೀಡಲು ಸಾಧ್ಯ ಎನಿಸಿತ್ತು. ಆದರೆ, ನಿಶಾಂತ ಸಾಹಿತ್ಯ ಹಾಗೂ ಹಾಡುಗಾರಿಕೆ ಕ್ಷೇತ್ರದಲ್ಲಿ ಮೇಲಕ್ಕೆ ಬರಲು ನಾನು ಅಲ್ವಸ್ವಲ್ಪವಾದರೂ ಸಹಾಯ ಮಾಡುವ ಎಂದು ಎನಿಸಿತು.

ಹಾಗೂ ಹೀಗೂ ಅಪ್ಪನ ಶಾಲೆ ಕಾರ್ಯಕ್ರಮಕ್ಕೆ ಬಂದಿದ್ದ ನಮ್ಮ ಸೀಮೆಯ ಈಗ ರಾಜ್ಯದ ಪ್ರಮುಖ ಸಾಹಿತಿ, ಸಂಗೀತ ನಿರ್ದೇಶಕ ಎನಿಸಿರುವ ಮಹಾನುಭಾವನನಿಗೆ ಕಾಲ್ ಮಾಡಿ ಭೇಟಿ ಮಾಡುವುದಾಗಿ ಕೇಳಿಕೊಂಡೆ. ನಿಶಾಂತ ನಾನು ಬೈಕ್ ನಲ್ಲಿ ಸ್ವಲ್ಪ ದೂರದಿದ್ದ ಅವ್ರ ಮನೆಗೆ ಹೋಗಿ ಬಂದೆವು. ನಿಶಾಂತನ ಸಾಹಿತ್ಯ ಇಷ್ಟಪಟ್ಟ ಸಾಹಿತಿ ಮುಂದೆ ಎಂದಾದರೂ ಬಳಸುವುದಾಗಿ ಹೇಳಿದರು.

ಮುಂದೆ ನಿಶಾಂತ ಅವರೊಂದಿಗೆ ಸಂಪರ್ಕದಲ್ಲಿದ್ದ, ಆದರೆ, ಆ ಸಾಹಿತಿಯ ರಚನೆಗಳೂ ಕೂಡಾ ಬೇರೆಡೆಯಿಂದ ನಕಲು ಮಾಡಿದ್ದು, ಪ್ರಭಾವಿತವಾಗಿದ್ದು ಎಂಬುದು ಅರಿತ ನಿಶಾಂತ ಅದನ್ನು ಅವರಿಗೆ ತಿಳಿಸುವ ಧೈರ್ಯ ಮಾಡಿದ್ದೆ ತಪ್ಪಾಯಿತು. ಮತ್ತೆ ಆ ಸಾಹಿತಿ ನಿಶಾಂತನ ಭೇಟಿ ಮಾಡಲೆ ಇಲ್ಲವಂತೆ. ಹೋಗ್ಲಿ ಬಿಟ್ಟಾಕು ನನಗೇನು ಹೆಚ್ಚಿಗೆ ನಿರೀಕ್ಷೆ ಇರಲಿಲ್ಲ ಎಂದು ಬಿಟ್ಟ.


ಮುಂದೆ ಒಂದು ದಿನ ಇದ್ದಕ್ಕಿದ್ದಂತೆ ಸಂಜೆ ಸಿಗ್ತೀಯಾ ಒಂದು ವಿಷ್ಯ ಹೇಳ್ಬೇಕು ಅಂದಾ. ನನಗೇನೋ ಅವನು ಹೇಳೋ ವಿಷ್ಯದ ಸುಳಿವು ಮನಸ್ಸಿನಲ್ಲಿ ಓಡಾಡತೊಡಗಿತು. ನಿರೀಕ್ಷೆಯಂತೆ ಅವನು ತನ್ನ ಮದುವೆ ಬಗ್ಗೆ ಪ್ರಸ್ತಾಪಿಸಿದ.

ನನಗೆ ಸಕತ್ ಖುಷಿಯಾಯ್ತು. ತನ್ನ ವೃತ್ತಿ, ಪ್ರವೃತ್ತಿಯನ್ನು ಮೆಚ್ಚುತ್ತಾ ಆತನನ್ನು ಪ್ರೋತ್ಸಾಹಿಸಿದ್ದವಳನ್ನೇ ಆರಿಸಿದ್ದ. ನನ್ನ ಊಹೆಯಂತೆ ಸ್ಮಿತಾ ಅವನಿಗೆ ತಕ್ಕ ಜೋಡಿಯಾಗಿದ್ದಳು. ಮಿತಭಾಷಿ ಸ್ಮಿತಾಳನ್ನು ಒಂದೆರಡು ಸಲ ಕಂಡಿದ್ದೆ ಅಷ್ಟೇ. ಆದರೆ, ಸ್ಮಿತಾಳ ಬಗ್ಗೆ ನಿಶಾಂತ ತೋರುತ್ತಿದ್ದ ಕಾಳಜಿ ಕಂಡು ನನಗಸಿತ್ತು ಎಂಥಾ ಜೋಡಿ ಎಂದು. ಆದರೆ ನಿಶಾಂತನಿಗೆ ಆ ಬಗ್ಗೆ ಹೇಳಿರಲಿಲ್ಲ.

ಎಲ್ಲವೂ ಸುಖಾಂತ್ಯ ಎಂದು ಕೊಂಡಿದ್ದ ಸಮಯದಲ್ಲಿ ಸ್ಮಿತಾಳಿಗೆ ವಿದೇಶದಲ್ಲಿ ಕೆಲ್ಸ ಸಿಕ್ಕಿತ್ತು. ವಿಧಿ ಇಲ್ಲದೆ ನಿಶಾಂತ ಕೂಡಾ ಜೊತೆ ತೆರಳಿದ.. ಅಲ್ಲಿಗೆ ಹೋದ ಮೇಲೂ ನನ್ನ ಸಂಪರ್ಕದಲ್ಲಿದ್ದ. ಆದರೆ, ಈಗ ಆತ ಕೂಡಾ ತನ್ನ ಸಂಸಾರದಲ್ಲಿ ಮುಳುಗಿದ್ದಾನೆ.. ಮತ್ತೆ ನನ್ನ ಪ್ರಜ್ಞೆಯಂತಿದ್ದ ಗೆಳೆಯನ ನಿರೀಕ್ಷೆ ಮಾತ್ರ ಹಾಗೆ ಇದೆ..

Monday, July 25, 2011

ಜಯರಾಮ...ಬರೀ ಫ್ರೆಂಡ್ ಅಷ್ಟೇ ಆಗಿರಲಿಲ್ಲ

ನಮ್ ಲೈಬ್ರರಿ ಆಫೀಸ್ ನಲ್ಲಿ ಎಲ್ಲರಿಗೂ ನನ್ನ ಹಾಗೂ ಜಯರಾಮ್ ಫ್ರೆಂಡ್ ಶಿಪ್ ಕಂಡು ಸಕತ್ ಹೊಟ್ಟೆಕಿಚ್ಚು, ನನಗೆ ಗೆಳೆಯನಿಗಿಂತ ಹೆಚ್ಚಾಗಿ ಸ್ವಂತ ಅಣ್ಣನಂತಿದ್ದ. ಅಫೀಸ್ ನಲ್ಲೂ ಏನ್ರಿ ನಿಮ್ ಜಯರಾಮಣ್ಣ ಏನಂತಾನೇ? ಎಂದು ನನ್ನನ್ನು ಕಿಚಾಸುತ್ತಿದ್ದರು. ಆದ್ರೆ ನಾನು ಯಾರಿಗೂ ಕೇರ್ ಮಾಡ್ತಾ ಇರ್ಲಿಲ್ಲ. ನನ್ನ ವೃತ್ತಿ ಜೀವನದಲ್ಲಷ್ಟೇ ಅಲ್ಲ. ನನ್ನ ವೈಯಕ್ತಿಕ ಜೀವನದ ಏಳಿಗೆಗೂ ಜಯರಾಮಣ್ಣ ಹಲವು ರೀತಿ ಕಾರಣನಾಗಿದ್ದಾನೆ.

ಅವನ ಬಗ್ಗೆ ಹೇಳ್ತಾ ಇದ್ರೆ ಸಮಯ ಸಾಲದು. ಜಯರಾಮ ಮಂಗಳೂರು ಕಡೆಯವನು. ಸ್ವಲ್ಪ ಸಿಡುಕಿನ ಸ್ವಭಾವ, ಸ್ವಾಭಿಮಾನಿ, ಕೀಟಲೆ ಬುದ್ಧಿ ಬೇರೆ. ಅವನ ಪತ್ನಿ ರಮಾ ನಮ್ಮೂರ ಕಡೆಯವಳು. ಗಣೇಶ ಅವರ ಪುಟ್ಟ ಕೂಸು. ಅಪ್ಪನಂತೆ ತರ್ಲೆ.

ಜಯರಾಮ ಡಬ್ಬಲ್ ಡಿಗ್ರಿ ಮುಗಿಸಿದ್ದ. ನಾನು ಆಗಿನ್ನೂ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದ್ದೆ.ನನಗೋ ಎಲ್ಲಾ ಹೊಸತು. ಕಂಪ್ಯೂಟರ್ ಗೊತ್ತಿಲ್ಲ. ಪಾಠ ಮಾಡೋ ಕಲೆನೂ ಕರಗತವಾಗಿರಲಿಲ್ಲ. ಗದ್ದೆ ನಾಟಿ ಕೆಲ್ಸ, ಮನೆ ಕೆಲಸ ಬಿಟ್ರೆ ಹಾಡು ಹಸೆ, ಕುಂಟೆಬಿಲ್ಲೆ, ಚೌಕಾಭಾರ ಅದು ಇದು ಆಡುತ್ತಾ ಬೆಳೆದವಳು. ವೃತ್ತಿ ಜೀವನಕ್ಕೆ ನಾನು ಕಾಲಿರಿಸಿದ್ದು ಕೆಲಸ ಮಾಡಿದ್ದು ಕೆಲ ವರ್ಷವಷ್ಟೇ ಎಂಬುದು ನನ್ನ ಪಾಲಿನ ಪರಮ ಸಂತೋಷದ ಸಂಗತಿ.

ಆದರೆ, ಇದ್ದಷ್ಟು ದಿನ ಜಯರಾಮನ ತಲೆ ತಿನ್ನುತ್ತಲೇ ಇದ್ದೆ. ನನ್ನ ಕಾಟ ಹೆಚ್ಚಾಗಿ ಎಷ್ಟೋ ಸಾರಿ 'ನಿ ಮನೆಗೆ ಹೋಗ್ತಿಯಾ ಸುಮ್ನೆ' ಅಂತಿದ್ದಾ.. ನಮ್ಮೂರಿಗೆ ಇರೋದು ಒಂದೇ ಬಸ್ ಅದು ಬರೋದು ಸಂಜೆನೇ ಎಂದು ಕಿಸಿತ್ತಿದ್ದೆ.

ಪ್ರತಿನಿತ್ಯ ಎಷ್ಟೇ ಕಿತ್ತಾಡಿದರೂ ಸಂಜೆ ಪಾನಿಪೂರಿ ತಿನ್ನಿಸುವುದನ್ನು ಮರೆಯುತ್ತಿರಲಿಲ್ಲ. ಇಬ್ಬರಿಗೂ ಇಷ್ಟವಾದ ಇನ್ನೊಂದು ಅಂಶ...ಮಳೆ. ಸುತ್ತಮುತ್ತ ಎಲ್ಲೆ ಮಳೆ ಹುಯ್ಯುತ್ತಲಿದ್ದರೂ ಅಲ್ಲಿ ನಾವು ಹಾಜರ್. ಕೆಲವೊಮ್ಮೆ ರಮಾ ಹಾಗೂ ಗಣೇಶನನ್ನು ಕರೆದುಕೊಂಡು ನಮ್ಮೂರ ಬಳಿ ಇದ್ದ ಪಕ್ಷಿಧಾಮಕ್ಕೆ ಮಳೆಯಲ್ಲೇ ಬಂದು ಬಿಡುತ್ತಿದ್ದ.

ಎಲ್ಲಾ ಚೆನ್ನಾಗಿತ್ತು.. ನಾನು ಕೆಲ್ಸ ಬಿಡೋ ತನಕ.. ನಾವು ಕೆಲ್ಸ ಮಾಡುತ್ತಿದ್ದ ಸಂಸ್ಥೆಗೆ ನಾನೇ ಗುಡ್ ಬೈ ಹೇಳಿದ್ನೋ ಅಥವಾ ಅವರೇ ನಿಮ್ಮ ಸೇವೆ ಸಾಕು... ಎಂದ್ರೋ ಗೊತ್ತಾಗಲಿಲ್ಲ.. ಎಲ್ಲಾ ಸಡನ್ ಆಗಿ ಬಿಡ್ತು.

ಆಮೇಲೆ ಜಯರಾಮ ಸಿಗೋದು ಕಷ್ಟ ಆಯ್ತು. ಮೊಬೈಲ್ ಇಲ್ಲದ ಕಾರಣ.. ಲ್ಯಾಂಡ್ ಲೈನ್ ಗೆ ಕರೆ ಮಾತಾಡ್ತಾ ಇದ್ದೆ. ಆದ್ರೆ ನಮ್ಮ ಆಫೀಸಿನಲ್ಲಿ ಫೋನ್ ನಲ್ಲಿ ಮಾತಾಡೋದಕ್ಕೆ ನಿರ್ಬಂಧವಿತ್ತು..ಮನೆಗೂ ಆಫೀಸಿಗೂ ಏನಿಲ್ಲ ಎಂದರೂ 15 ಕಿ.ಮೀ...

ಬರಬರುತ್ತಾ ಜಯರಾಮ ಅವನ ಕುಟುಂಬ ನೋಡೋದೆ ಕಷ್ಟ ಆಯ್ತು.. ಬೇಸಿಗೆಯಲ್ಲಾದರೆ ಒಂದಿಲ್ಲ ಒಂದು ಊಟದ ಮನೆಯಲ್ಲಿ ದರ್ಶನ ಆಗುತ್ತಿತ್ತು. ಈಗ ಮಳೆಗಾಲ..ಆಫೀಸಿಗೂ ರಜೆ.. ನನಗೋ ಕೆಲ್ಸವಿಲ್ಲದೆ ಒಂದು ರೀತಿ ಸಜೆ..ಜಯರಾಮ ಏನಾದ? ತಿಳಿಯದೇ ಮನಸ್ಸು ತೊಳಲಾಟದಲ್ಲಿತ್ತು..

ಮನಸ್ಸು ಸಂಪೂರ್ಣ ಖಾಲಿಯಾದ ಪರಿಸ್ಥಿತಿಯಲ್ಲಿ ಕಾಣಿಸಿಕೊಂಡವನೇ ನಿಶಾಂತ ನಾಯಕ.. ಹೆಸರೇ ಒಂದು ರೀತಿ ಆಕರ್ಷಣೆಯಾಗಿತ್ತು ನನಗೆ.. ನಿಶಾಂತನಿಂದ ಮನಸ್ಸಿಗೆ ಪ್ರಶಾಂತ ಸ್ಥಿತಿ ಮತ್ತೆ ಆವರಿಸಿತು.[ಸಶೇಷ]

Sunday, July 24, 2011

ಮಳೆಯ ಹನಿ ಜೊತೆ ಮರೆಯದ ಮಾಯೆಯ ಮನಸ್ಸು



ಮತ್ತೆ ಮಳೆ ಹನಿ ಸುರಿಯುತ್ತಿದೆ. ನೆನಪಿನ ಗರಿ ಒಂದೊಂದಾಗಿ ಬಿಚ್ಚ ತೊಡಗಿದೆ.

ಸುಮಾರು ಒಂದು ವರ್ಷ ಎರಡೂವರೆ ತಿಂಗಳ ನಂತರ ಬರೆಯಬೇಕೆಂಬ ಹಂಬಲ ಉಂಟಾಗಿದೆ.

ಇದಕ್ಕೆ ಮಳೆ ಹಿಮ್ಮೇಳ ಜೊತೆಗೂಡಿದೆ ಅಥವಾ ನನ್ನ ಮನಸ್ಸು ಮಳೆಗಾಲಕ್ಕೆ ಕಾದು ಕೂತ್ತಿತ್ತೋ ಗೊತ್ತಿಲ್ಲ. ಏನೋ ಇರಲಿ...

ಈಗ ಒಂದು ಕಥೆ ಹೇಳುತ್ತೇನೆ. ಸ್ನೇಹಿತರ ಕಥೆ ಅದರಲ್ಲಿ ಒಂದಿಷ್ಟು ಪ್ರೇಮ ಕಥೆಗಳು ಉಪಕಥೆಯಾಗಿ ಇಣುಕುತ್ತವೆ. ಐದಾರು ವರ್ಷಕ್ಕೂ ಹಳೆಯದಾದ ನೈಜ ಘಟನೆಗಳನ್ನು ಆಧರಿಸಿದ ಇದು ನನ್ನ ನಿಮ್ಮ ಕಥೆ ಆಗಿರಲೂ ಬಹುದು.

ಪ್ರೇಮ, ಕಾಮದ ಸೋಂಕು ತಗುಲದ ಅನ್ಯೋನ್ಯ ಗೆಳೆತನಕ್ಕೆ ಮತ್ತೊಂದು ಹೆಸರು ಎಂಬಂತ್ತಿದ್ದ, ಎಂಬಂತೆ ಇರುವ ಗೆಳೆಯ, ಗೆಳತಿಯರ ಕಥೆ..ಒಂದಿಷ್ಟು ಮುನಿಸು..

ಒಂದಿಷ್ಟು ಕಾರಣವಿಲ್ಲದ ವಿದಾಯಕ್ಕೆ ಮುನ್ನುಡಿ ಹಾಡಿದ ಸ್ನೇಹದ ಪರಿಧಿಯೊಳಗೆ ಮತ್ತೊಮ್ಮೆ ಇಳಿಯುವ ತವಕದಲ್ಲಿ ನಾನಿದ್ದೇನೆ...ಮಿಕ್ಕಿದ್ದು ನಾಳೆಗೆ....