ನಮ್ ಲೈಬ್ರರಿ ಆಫೀಸ್ ನಲ್ಲಿ ಎಲ್ಲರಿಗೂ ನನ್ನ ಹಾಗೂ ಜಯರಾಮ್ ಫ್ರೆಂಡ್ ಶಿಪ್ ಕಂಡು ಸಕತ್ ಹೊಟ್ಟೆಕಿಚ್ಚು, ನನಗೆ ಗೆಳೆಯನಿಗಿಂತ ಹೆಚ್ಚಾಗಿ ಸ್ವಂತ ಅಣ್ಣನಂತಿದ್ದ. ಅಫೀಸ್ ನಲ್ಲೂ ಏನ್ರಿ ನಿಮ್ ಜಯರಾಮಣ್ಣ ಏನಂತಾನೇ? ಎಂದು ನನ್ನನ್ನು ಕಿಚಾಸುತ್ತಿದ್ದರು. ಆದ್ರೆ ನಾನು ಯಾರಿಗೂ ಕೇರ್ ಮಾಡ್ತಾ ಇರ್ಲಿಲ್ಲ. ನನ್ನ ವೃತ್ತಿ ಜೀವನದಲ್ಲಷ್ಟೇ ಅಲ್ಲ. ನನ್ನ ವೈಯಕ್ತಿಕ ಜೀವನದ ಏಳಿಗೆಗೂ ಜಯರಾಮಣ್ಣ ಹಲವು ರೀತಿ ಕಾರಣನಾಗಿದ್ದಾನೆ.
ಅವನ ಬಗ್ಗೆ ಹೇಳ್ತಾ ಇದ್ರೆ ಸಮಯ ಸಾಲದು. ಜಯರಾಮ ಮಂಗಳೂರು ಕಡೆಯವನು. ಸ್ವಲ್ಪ ಸಿಡುಕಿನ ಸ್ವಭಾವ, ಸ್ವಾಭಿಮಾನಿ, ಕೀಟಲೆ ಬುದ್ಧಿ ಬೇರೆ. ಅವನ ಪತ್ನಿ ರಮಾ ನಮ್ಮೂರ ಕಡೆಯವಳು. ಗಣೇಶ ಅವರ ಪುಟ್ಟ ಕೂಸು. ಅಪ್ಪನಂತೆ ತರ್ಲೆ.
ಜಯರಾಮ ಡಬ್ಬಲ್ ಡಿಗ್ರಿ ಮುಗಿಸಿದ್ದ. ನಾನು ಆಗಿನ್ನೂ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದ್ದೆ.ನನಗೋ ಎಲ್ಲಾ ಹೊಸತು. ಕಂಪ್ಯೂಟರ್ ಗೊತ್ತಿಲ್ಲ. ಪಾಠ ಮಾಡೋ ಕಲೆನೂ ಕರಗತವಾಗಿರಲಿಲ್ಲ. ಗದ್ದೆ ನಾಟಿ ಕೆಲ್ಸ, ಮನೆ ಕೆಲಸ ಬಿಟ್ರೆ ಹಾಡು ಹಸೆ, ಕುಂಟೆಬಿಲ್ಲೆ, ಚೌಕಾಭಾರ ಅದು ಇದು ಆಡುತ್ತಾ ಬೆಳೆದವಳು. ವೃತ್ತಿ ಜೀವನಕ್ಕೆ ನಾನು ಕಾಲಿರಿಸಿದ್ದು ಕೆಲಸ ಮಾಡಿದ್ದು ಕೆಲ ವರ್ಷವಷ್ಟೇ ಎಂಬುದು ನನ್ನ ಪಾಲಿನ ಪರಮ ಸಂತೋಷದ ಸಂಗತಿ.
ಆದರೆ, ಇದ್ದಷ್ಟು ದಿನ ಜಯರಾಮನ ತಲೆ ತಿನ್ನುತ್ತಲೇ ಇದ್ದೆ. ನನ್ನ ಕಾಟ ಹೆಚ್ಚಾಗಿ ಎಷ್ಟೋ ಸಾರಿ 'ನಿ ಮನೆಗೆ ಹೋಗ್ತಿಯಾ ಸುಮ್ನೆ' ಅಂತಿದ್ದಾ.. ನಮ್ಮೂರಿಗೆ ಇರೋದು ಒಂದೇ ಬಸ್ ಅದು ಬರೋದು ಸಂಜೆನೇ ಎಂದು ಕಿಸಿತ್ತಿದ್ದೆ.
ಪ್ರತಿನಿತ್ಯ ಎಷ್ಟೇ ಕಿತ್ತಾಡಿದರೂ ಸಂಜೆ ಪಾನಿಪೂರಿ ತಿನ್ನಿಸುವುದನ್ನು ಮರೆಯುತ್ತಿರಲಿಲ್ಲ. ಇಬ್ಬರಿಗೂ ಇಷ್ಟವಾದ ಇನ್ನೊಂದು ಅಂಶ...ಮಳೆ. ಸುತ್ತಮುತ್ತ ಎಲ್ಲೆ ಮಳೆ ಹುಯ್ಯುತ್ತಲಿದ್ದರೂ ಅಲ್ಲಿ ನಾವು ಹಾಜರ್. ಕೆಲವೊಮ್ಮೆ ರಮಾ ಹಾಗೂ ಗಣೇಶನನ್ನು ಕರೆದುಕೊಂಡು ನಮ್ಮೂರ ಬಳಿ ಇದ್ದ ಪಕ್ಷಿಧಾಮಕ್ಕೆ ಮಳೆಯಲ್ಲೇ ಬಂದು ಬಿಡುತ್ತಿದ್ದ.
ಎಲ್ಲಾ ಚೆನ್ನಾಗಿತ್ತು.. ನಾನು ಕೆಲ್ಸ ಬಿಡೋ ತನಕ.. ನಾವು ಕೆಲ್ಸ ಮಾಡುತ್ತಿದ್ದ ಸಂಸ್ಥೆಗೆ ನಾನೇ ಗುಡ್ ಬೈ ಹೇಳಿದ್ನೋ ಅಥವಾ ಅವರೇ ನಿಮ್ಮ ಸೇವೆ ಸಾಕು... ಎಂದ್ರೋ ಗೊತ್ತಾಗಲಿಲ್ಲ.. ಎಲ್ಲಾ ಸಡನ್ ಆಗಿ ಬಿಡ್ತು.
ಆಮೇಲೆ ಜಯರಾಮ ಸಿಗೋದು ಕಷ್ಟ ಆಯ್ತು. ಮೊಬೈಲ್ ಇಲ್ಲದ ಕಾರಣ.. ಲ್ಯಾಂಡ್ ಲೈನ್ ಗೆ ಕರೆ ಮಾತಾಡ್ತಾ ಇದ್ದೆ. ಆದ್ರೆ ನಮ್ಮ ಆಫೀಸಿನಲ್ಲಿ ಫೋನ್ ನಲ್ಲಿ ಮಾತಾಡೋದಕ್ಕೆ ನಿರ್ಬಂಧವಿತ್ತು..ಮನೆಗೂ ಆಫೀಸಿಗೂ ಏನಿಲ್ಲ ಎಂದರೂ 15 ಕಿ.ಮೀ...
ಬರಬರುತ್ತಾ ಜಯರಾಮ ಅವನ ಕುಟುಂಬ ನೋಡೋದೆ ಕಷ್ಟ ಆಯ್ತು.. ಬೇಸಿಗೆಯಲ್ಲಾದರೆ ಒಂದಿಲ್ಲ ಒಂದು ಊಟದ ಮನೆಯಲ್ಲಿ ದರ್ಶನ ಆಗುತ್ತಿತ್ತು. ಈಗ ಮಳೆಗಾಲ..ಆಫೀಸಿಗೂ ರಜೆ.. ನನಗೋ ಕೆಲ್ಸವಿಲ್ಲದೆ ಒಂದು ರೀತಿ ಸಜೆ..ಜಯರಾಮ ಏನಾದ? ತಿಳಿಯದೇ ಮನಸ್ಸು ತೊಳಲಾಟದಲ್ಲಿತ್ತು..
ಮನಸ್ಸು ಸಂಪೂರ್ಣ ಖಾಲಿಯಾದ ಪರಿಸ್ಥಿತಿಯಲ್ಲಿ ಕಾಣಿಸಿಕೊಂಡವನೇ ನಿಶಾಂತ ನಾಯಕ.. ಹೆಸರೇ ಒಂದು ರೀತಿ ಆಕರ್ಷಣೆಯಾಗಿತ್ತು ನನಗೆ.. ನಿಶಾಂತನಿಂದ ಮನಸ್ಸಿಗೆ ಪ್ರಶಾಂತ ಸ್ಥಿತಿ ಮತ್ತೆ ಆವರಿಸಿತು.[ಸಶೇಷ]
No comments:
Post a Comment