ನಮ್ ಲೈಬ್ರರಿ ಆಫೀಸ್ ನಲ್ಲಿ ಎಲ್ಲರಿಗೂ ನನ್ನ ಹಾಗೂ ಜಯರಾಮ್ ಫ್ರೆಂಡ್ ಶಿಪ್ ಕಂಡು ಸಕತ್ ಹೊಟ್ಟೆಕಿಚ್ಚು, ನನಗೆ ಗೆಳೆಯನಿಗಿಂತ ಹೆಚ್ಚಾಗಿ ಸ್ವಂತ ಅಣ್ಣನಂತಿದ್ದ. ಅಫೀಸ್ ನಲ್ಲೂ ಏನ್ರಿ ನಿಮ್ ಜಯರಾಮಣ್ಣ ಏನಂತಾನೇ? ಎಂದು ನನ್ನನ್ನು ಕಿಚಾಸುತ್ತಿದ್ದರು. ಆದ್ರೆ ನಾನು ಯಾರಿಗೂ ಕೇರ್ ಮಾಡ್ತಾ ಇರ್ಲಿಲ್ಲ. ನನ್ನ ವೃತ್ತಿ ಜೀವನದಲ್ಲಷ್ಟೇ ಅಲ್ಲ. ನನ್ನ ವೈಯಕ್ತಿಕ ಜೀವನದ ಏಳಿಗೆಗೂ ಜಯರಾಮಣ್ಣ ಹಲವು ರೀತಿ ಕಾರಣನಾಗಿದ್ದಾನೆ.
ಅವನ ಬಗ್ಗೆ ಹೇಳ್ತಾ ಇದ್ರೆ ಸಮಯ ಸಾಲದು. ಜಯರಾಮ ಮಂಗಳೂರು ಕಡೆಯವನು. ಸ್ವಲ್ಪ ಸಿಡುಕಿನ ಸ್ವಭಾವ, ಸ್ವಾಭಿಮಾನಿ, ಕೀಟಲೆ ಬುದ್ಧಿ ಬೇರೆ. ಅವನ ಪತ್ನಿ ರಮಾ ನಮ್ಮೂರ ಕಡೆಯವಳು. ಗಣೇಶ ಅವರ ಪುಟ್ಟ ಕೂಸು. ಅಪ್ಪನಂತೆ ತರ್ಲೆ.
ಜಯರಾಮ ಡಬ್ಬಲ್ ಡಿಗ್ರಿ ಮುಗಿಸಿದ್ದ. ನಾನು ಆಗಿನ್ನೂ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದ್ದೆ.ನನಗೋ ಎಲ್ಲಾ ಹೊಸತು. ಕಂಪ್ಯೂಟರ್ ಗೊತ್ತಿಲ್ಲ. ಪಾಠ ಮಾಡೋ ಕಲೆನೂ ಕರಗತವಾಗಿರಲಿಲ್ಲ. ಗದ್ದೆ ನಾಟಿ ಕೆಲ್ಸ, ಮನೆ ಕೆಲಸ ಬಿಟ್ರೆ ಹಾಡು ಹಸೆ, ಕುಂಟೆಬಿಲ್ಲೆ, ಚೌಕಾಭಾರ ಅದು ಇದು ಆಡುತ್ತಾ ಬೆಳೆದವಳು. ವೃತ್ತಿ ಜೀವನಕ್ಕೆ ನಾನು ಕಾಲಿರಿಸಿದ್ದು ಕೆಲಸ ಮಾಡಿದ್ದು ಕೆಲ ವರ್ಷವಷ್ಟೇ ಎಂಬುದು ನನ್ನ ಪಾಲಿನ ಪರಮ ಸಂತೋಷದ ಸಂಗತಿ.
ಆದರೆ, ಇದ್ದಷ್ಟು ದಿನ ಜಯರಾಮನ ತಲೆ ತಿನ್ನುತ್ತಲೇ ಇದ್ದೆ. ನನ್ನ ಕಾಟ ಹೆಚ್ಚಾಗಿ ಎಷ್ಟೋ ಸಾರಿ 'ನಿ ಮನೆಗೆ ಹೋಗ್ತಿಯಾ ಸುಮ್ನೆ' ಅಂತಿದ್ದಾ.. ನಮ್ಮೂರಿಗೆ ಇರೋದು ಒಂದೇ ಬಸ್ ಅದು ಬರೋದು ಸಂಜೆನೇ ಎಂದು ಕಿಸಿತ್ತಿದ್ದೆ.
ಪ್ರತಿನಿತ್ಯ ಎಷ್ಟೇ ಕಿತ್ತಾಡಿದರೂ ಸಂಜೆ ಪಾನಿಪೂರಿ ತಿನ್ನಿಸುವುದನ್ನು ಮರೆಯುತ್ತಿರಲಿಲ್ಲ. ಇಬ್ಬರಿಗೂ ಇಷ್ಟವಾದ ಇನ್ನೊಂದು ಅಂಶ...ಮಳೆ. ಸುತ್ತಮುತ್ತ ಎಲ್ಲೆ ಮಳೆ ಹುಯ್ಯುತ್ತಲಿದ್ದರೂ ಅಲ್ಲಿ ನಾವು ಹಾಜರ್. ಕೆಲವೊಮ್ಮೆ ರಮಾ ಹಾಗೂ ಗಣೇಶನನ್ನು ಕರೆದುಕೊಂಡು ನಮ್ಮೂರ ಬಳಿ ಇದ್ದ ಪಕ್ಷಿಧಾಮಕ್ಕೆ ಮಳೆಯಲ್ಲೇ ಬಂದು ಬಿಡುತ್ತಿದ್ದ.
ಎಲ್ಲಾ ಚೆನ್ನಾಗಿತ್ತು.. ನಾನು ಕೆಲ್ಸ ಬಿಡೋ ತನಕ.. ನಾವು ಕೆಲ್ಸ ಮಾಡುತ್ತಿದ್ದ ಸಂಸ್ಥೆಗೆ ನಾನೇ ಗುಡ್ ಬೈ ಹೇಳಿದ್ನೋ ಅಥವಾ ಅವರೇ ನಿಮ್ಮ ಸೇವೆ ಸಾಕು... ಎಂದ್ರೋ ಗೊತ್ತಾಗಲಿಲ್ಲ.. ಎಲ್ಲಾ ಸಡನ್ ಆಗಿ ಬಿಡ್ತು.
ಆಮೇಲೆ ಜಯರಾಮ ಸಿಗೋದು ಕಷ್ಟ ಆಯ್ತು. ಮೊಬೈಲ್ ಇಲ್ಲದ ಕಾರಣ.. ಲ್ಯಾಂಡ್ ಲೈನ್ ಗೆ ಕರೆ ಮಾತಾಡ್ತಾ ಇದ್ದೆ. ಆದ್ರೆ ನಮ್ಮ ಆಫೀಸಿನಲ್ಲಿ ಫೋನ್ ನಲ್ಲಿ ಮಾತಾಡೋದಕ್ಕೆ ನಿರ್ಬಂಧವಿತ್ತು..ಮನೆಗೂ ಆಫೀಸಿಗೂ ಏನಿಲ್ಲ ಎಂದರೂ 15 ಕಿ.ಮೀ...
ಬರಬರುತ್ತಾ ಜಯರಾಮ ಅವನ ಕುಟುಂಬ ನೋಡೋದೆ ಕಷ್ಟ ಆಯ್ತು.. ಬೇಸಿಗೆಯಲ್ಲಾದರೆ ಒಂದಿಲ್ಲ ಒಂದು ಊಟದ ಮನೆಯಲ್ಲಿ ದರ್ಶನ ಆಗುತ್ತಿತ್ತು. ಈಗ ಮಳೆಗಾಲ..ಆಫೀಸಿಗೂ ರಜೆ.. ನನಗೋ ಕೆಲ್ಸವಿಲ್ಲದೆ ಒಂದು ರೀತಿ ಸಜೆ..ಜಯರಾಮ ಏನಾದ? ತಿಳಿಯದೇ ಮನಸ್ಸು ತೊಳಲಾಟದಲ್ಲಿತ್ತು..
ಮನಸ್ಸು ಸಂಪೂರ್ಣ ಖಾಲಿಯಾದ ಪರಿಸ್ಥಿತಿಯಲ್ಲಿ ಕಾಣಿಸಿಕೊಂಡವನೇ ನಿಶಾಂತ ನಾಯಕ.. ಹೆಸರೇ ಒಂದು ರೀತಿ ಆಕರ್ಷಣೆಯಾಗಿತ್ತು ನನಗೆ.. ನಿಶಾಂತನಿಂದ ಮನಸ್ಸಿಗೆ ಪ್ರಶಾಂತ ಸ್ಥಿತಿ ಮತ್ತೆ ಆವರಿಸಿತು.[ಸಶೇಷ]
ಮಲೆನಾಡಿನ ಮಳೆ ಹನಿಯಂತೆ ನನ್ನ ಮನಸ್ಸು!!! ತೇವದ ಹನಿಗಳ ನಡುವೆ ಅಕ್ಷರದ ಬೆಚ್ಚನೆಯ ಕಾವು ಸಿಗುವುದೆಂಬ ಎಂಬ ಮರೀಚಿಕೆ ಹುಡುಕಾಟ...
Monday, July 25, 2011
Sunday, July 24, 2011
ಮಳೆಯ ಹನಿ ಜೊತೆ ಮರೆಯದ ಮಾಯೆಯ ಮನಸ್ಸು
ಮತ್ತೆ ಮಳೆ ಹನಿ ಸುರಿಯುತ್ತಿದೆ. ನೆನಪಿನ ಗರಿ ಒಂದೊಂದಾಗಿ ಬಿಚ್ಚ ತೊಡಗಿದೆ.
ಸುಮಾರು ಒಂದು ವರ್ಷ ಎರಡೂವರೆ ತಿಂಗಳ ನಂತರ ಬರೆಯಬೇಕೆಂಬ ಹಂಬಲ ಉಂಟಾಗಿದೆ.
ಇದಕ್ಕೆ ಮಳೆ ಹಿಮ್ಮೇಳ ಜೊತೆಗೂಡಿದೆ ಅಥವಾ ನನ್ನ ಮನಸ್ಸು ಮಳೆಗಾಲಕ್ಕೆ ಕಾದು ಕೂತ್ತಿತ್ತೋ ಗೊತ್ತಿಲ್ಲ. ಏನೋ ಇರಲಿ...
ಈಗ ಒಂದು ಕಥೆ ಹೇಳುತ್ತೇನೆ. ಸ್ನೇಹಿತರ ಕಥೆ ಅದರಲ್ಲಿ ಒಂದಿಷ್ಟು ಪ್ರೇಮ ಕಥೆಗಳು ಉಪಕಥೆಯಾಗಿ ಇಣುಕುತ್ತವೆ. ಐದಾರು ವರ್ಷಕ್ಕೂ ಹಳೆಯದಾದ ನೈಜ ಘಟನೆಗಳನ್ನು ಆಧರಿಸಿದ ಇದು ನನ್ನ ನಿಮ್ಮ ಕಥೆ ಆಗಿರಲೂ ಬಹುದು.
ಪ್ರೇಮ, ಕಾಮದ ಸೋಂಕು ತಗುಲದ ಅನ್ಯೋನ್ಯ ಗೆಳೆತನಕ್ಕೆ ಮತ್ತೊಂದು ಹೆಸರು ಎಂಬಂತ್ತಿದ್ದ, ಎಂಬಂತೆ ಇರುವ ಗೆಳೆಯ, ಗೆಳತಿಯರ ಕಥೆ..ಒಂದಿಷ್ಟು ಮುನಿಸು..
ಒಂದಿಷ್ಟು ಕಾರಣವಿಲ್ಲದ ವಿದಾಯಕ್ಕೆ ಮುನ್ನುಡಿ ಹಾಡಿದ ಸ್ನೇಹದ ಪರಿಧಿಯೊಳಗೆ ಮತ್ತೊಮ್ಮೆ ಇಳಿಯುವ ತವಕದಲ್ಲಿ ನಾನಿದ್ದೇನೆ...ಮಿಕ್ಕಿದ್ದು ನಾಳೆಗೆ....
Saturday, April 10, 2010
ತೇಜಸ್ವಿ ಬರೀ ಸ್ಮಾರಕಕ್ಕೆ ಸೀಮಿತವಾಗದಿರಲಿ!

ಅಂತೂ ಬಿಡುವು ಮಾಡಿಕೊಂಡು ಬ್ಲಾಗ್ ಗೆ ಅಂತಾ ನಾಲ್ಕು ಸಾಲು ಬರೆಯೋಣ ಅನ್ನಿಸಿತು. ಕೈಲಿ ಪೆನ್ ಹಿಡಿದು ಬಿಳಿ ಹಾಳೆ ಮೇಲೆ ಅಕ್ಷರ ಯಜ್ಞ ಮಾಡಲು ಕೂತರೆ, ಆಗ ತಾನೆ ಕೊಲ್ಲೂರಲ್ಲಿ ಅಪ್ಪನ ಕೈ ಹಿಡಿದು ಓನಾಮ ಬರೆದ ನೆನಪು ಮರುಕಳಿಸಿತು.
ಬರವಣಿಗೆ ಇರಲಿ, ಓದಿರಲಿ,ಯಾವುದೇ ಕೆಲಸವಿರಲಿ ಹೆಚ್ಚು ದಿನ ವಿರಾಮದ ನಂತರ ಮತ್ತೆ ಶುರು ಮಾಡಿದರೆ ಆಗುವ ಎಲ್ಲಾ ಅನನುಕೂಲಗಳ ಹಿನ್ನೆಲೆ ಇಟ್ಟುಕೊಂಡೇ ಬರೆಯಲು ಕೂತೆ. ಅನ್ನಿಸಿದ್ದನ್ನೆಲ್ಲ ಬರೆದು ಮುಗಿಸಿಬಿಡಬೇಕೆಂಬ ಹಂಬಲವಂತೂ ನನಗಿಲ್ಲ.
ಬರೆಯಲು ಸರಿ ಕಾರಣ ಸಿಗಲಿಲ್ಲವೆಂದರೆ ಮನಸ್ಸು ಸಹಕರಿಸುವುದಿಲ್ಲ. ಒಂದು ಸಾಲು ಸೃಷ್ಟಿಯೂಗುವುದಿಲ್ಲ. ಇರಲಿ, ಈಗ ನಮ್ಮಲ್ಲಿ ನಾಲ್ಕಾರು ದಿನದಿಂದ ಬಿಟ್ಟು ಬಿಡದಂತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆಯ ಕಾರಣವೋ ಏನೋ ಬರೆಯುವ ಉಮೇದು ಹುಟ್ಟಿತು.
ತೇಜಸ್ವಿ ಮರೆಯಾಗಿ ೩ ವರ್ಷ ಕಳೆಯಿತು. ಮೊನ್ನೆ ಕುಪ್ಪಳಿಯಲ್ಲಿ ಸ್ಮಾರಕವೂ ಸ್ಥಾಪನೆಯಾಯಿತು. ನೆನ್ನೆ ನಾರ್ವೆ ಕಡೆ ಹೊರಟಿದ್ದವಳು ತುಸು ದೂರ ಹಾಗೆ ಮುಂದೆ ಸಾಗಿ ಸ್ಮಾರಕವನ್ನು ನೋಡಿ ಬಂದೆ. ಆಗಿಂದ ಮನದಲ್ಲಿ ಪ್ರಶ್ನೆ ಉದ್ಭವಿಸುತ್ತಲೇ ಇತ್ತು. ತೇಜಸ್ವಿಗೆ ಸ್ಮಾರಕ ಅಗತ್ಯವೇ? ಯಾವ ಪ್ರಶಸ್ತಿ, ಪಾರಿತೋಷಕ, ಹಾರ ತುರಾಯಿ, ಸ್ಮಾರಕ, ಬೆಂಬಲಿಗರ ದಂಡನ್ನು ನೆಚ್ಚಿಕೊಳ್ಳದ ಎನ್ನ ಗುರುವನ್ನು ಸ್ಮಾರಕ ಎಂಬ ಸೌಧದಲ್ಲಿ ಬಂಧಿಸುವುದು ತರವೇ ಎಂದು.
ಮೂಡಿಗೆರೆಯಲ್ಲಿ ತೇಜಸ್ವಿ ಆಶಯಗಳನ್ನು ಸಾಕಾರಗೊಳಿಸಲು ಒಂದು ಪ್ರತಿಷ್ಠಾನ ಇದೆ. ಅದು ನಿಧಾನಗತಿಯಲ್ಲಿಯಾದರೂ ತನ್ನ ಕಾರ್ಯವನ್ನು ಆರಂಭಿಸಿದೆ. ಆದರೆ, ಕುಪ್ಪಳಿಯಲ್ಲಿ ತೇಜಸ್ವಿ ಹೆಸರಿನಲ್ಲಿ ಏಳು ಬೃಹತ್ ಕಂಬಗಳನ್ನು ನೆಟ್ಟು, ಅದರ ಅರ್ಥ ವಿವರಣೆ ಕೂಡ ನೀಡದೆ, ತೇಜಸ್ವಿ ಆರಾಧಕರ ದಂಡು ನಿರ್ಮಿಸುವುದು ಸರಿಯೆ.
ಒಂದು ವಿಷಯ ನೆನಪಿರಲಿ, ತೇಜಸ್ವಿಯಲ್ಲಿ ಹತ್ತಿರದಿಂದ ಬಲ್ಲ ಆಪ್ತರಿಗಿಂತ ಹತ್ತು ಪಟ್ಟು ಹೆಚ್ಚು ಜನ ಅವರನ್ನು ಮಾನಸಿಕ ಗುರುವಾಗಿ ಭಾವಿಸಿ, ಪರಿಸರ ಸಂರಕ್ಷಣೆಯೋ, ಬರವಣಿಗೆಯೋ, ಫೋಟೋಗ್ರಾಫಿಯೋ, ತಂತ್ರಾಂಶವೋ ಮತ್ತೊಂದು ಕ್ಷೇತ್ರದಲ್ಲಿ ಅವರ ಆಶಯವನ್ನು ಪಾಲಿಸುತ್ತಾ ಬಂದಿದ್ದಾರೆ.
ಈ ಸಂಖ್ಯೆ ಬೆಳೆಯುತ್ತಲೇ ಇದೆ. ಇವರಲ್ಲಿ ಹೆಚ್ಚು ಜನ ಪ್ರತ್ಯಕ್ಷವಾಗಿ ತೇಜಸ್ವಿಯನ್ನು ದೂರದಿಂದಾದರೂ ಕಂಡವರಲ್ಲ. ಕೇವಲ ಅವರ ಬರಹಗಳ ಮೂಲಕ ಸ್ಫೂರ್ತಿ ಪಡೆದು ಸದಭಿರುಚಿ ಕಾರ್ಯಗಳಲ್ಲಿ ತೊಡಗಿಕೊಂಡವರು.
ಕಾಡಿನಲ್ಲಿ ತಾನೇ ತಾನಾಗಿ ಬೆಳೆವ ಮರಗಳ ನೆರಳನಲ್ಲಿ, ಹಕ್ಕಿಗಳ ಇಂಪಿನ ನಡುವೆ ತೇಜಸ್ವಿ ಒಂದಾಗಿ ಇರಲಿ ಎಂಬ ಉದ್ದೇಶದಿಂದ ಕುಪ್ಪಳಿಯಲ್ಲಿ ಸ್ಮಾರಕ ಸ್ಥಾಪಿಸಿದ್ದರೆ ಸರಿ. ಇಲ್ಲವಾದರೆ, ಎಲ್ಲರಂತೆ, ತೇಜಸ್ವಿ ಎಂಬ ಬ್ರಾಂಡ್ ನೇಮ್ ಹಿಂದೆ ಬಿದ್ದು, ಗಲ್ಲಿ ಗಲ್ಲಿಗೆ ಹೆಸರು ಮೂಲೆ ಮೂಲೆಗೆ ಸ್ಮಾರಕ, ಒಂದಿಷ್ಟು ಅವರ ಹೆಸರಿನಲ್ಲಿ ಪ್ರಶಸ್ತಿ, ಪುರಸ್ಕಾರ ಎಂಬಂತಾದರೆ... ಕ್ಷಮಿಸಿ, ತೇಜಸ್ವಿಗೆ ಅದು ಮಾಡುವ ಅಪಮಾನವಾದೀತು.
ಸ್ಮಾರಕ ಮಾಡಲು ಯಾರು ಬೇಡಲಿಲ್ಲ. ನಮ್ಮ ಇಷ್ಟ ನಾವು ಮಾಡಿದೆವು ಎಂದು ಅವರ ಕುಟುಂಬ, ಆಪ್ತರು ಹೇಳಬಹುದು. ಆದರೆ, ಇದು ಖಾಸಗಿ ವಿಷಯವಲ್ಲ. ಇರಲಿ, ತೇಜಸ್ವಿ ಸ್ಮಾರಕ ಸ್ಥಾಪನೆಯಾಯ್ತು ಮುಂದೇನು? ಸುತ್ತಮುತ್ತಲ ಅರಣ್ಯ ಸಂರಕ್ಷಣೆಗೆ ಸ್ಮಾರಕ ಸ್ಥಾಪಕರು ಮುಂದಾಗಬಹುದು. ಕವಿಮನೆ(ಕುವೆಂಪು ಮೂಲಮನೆ) ಯಂತೆ ತೇಜಸ್ವಿ ಹೆಸರಲ್ಲಿ ಪರ್ಣಕುಟೀರ ನಿರ್ಮಿಸಬಹುದು.
ಅಲ್ಲಿ ಅಧ್ಯಯನ ಪೀಠ ಸ್ಥಾಪಿಸಬಹುದು, ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳು, ತೇಜಸ್ವಿ ಆಗಿದ್ದರೂ, ಹೀಗಿದ್ದರೂ, ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು ಎಂದೆಲ್ಲಾ ಬೊಬ್ಬೆ ಹಾಕಬಹುದು. ನಿಮ್ಮ ನಿಮ್ಮ ಕಾರ್ಯಗಳನ್ನು ನಿಮ್ಮ ನಿಮ್ಮ ಚೌಕಟ್ಟಿನಲ್ಲಿ ಸರಿಯಾಗಿ ನಿಭಾಯಿಸಿದರೆ ಅಷ್ಟು ಸಾಕು. ತೇಜಸ್ವಿ ಹೆಸರಿನಲ್ಲಿ ಪೋಗ್ರಾಂ ಮಾಡಿದರೆ ಯಾವ ಪುರಷಾರ್ಥ ಸಾಧನೆಯೂ ಆಗುವುದಿಲ್ಲ.
ತೇಜಸ್ವಿ ಎಂದರೆ ಒಂದೂವರೆ ಅಡಿಪಾಯದ ಮೇಲಿನ 10 ಅಡಿ ಎತ್ತರದ 7 ಕಂಬಗಳು ಎಂದು ಆಗದಿರಲಿ. ಕಲ್ಲಿನ ಪಕ್ಕ ನಾಲ್ಕು ಮರ ನೆಟ್ಟು ಹಕ್ಕಿಗಳನ್ನು ಆಹ್ವಾನಿಸಿ, ಅಲ್ಲೊಂದು ಕಾಡಿನ ನಡುವೆ ಇರುವ ನಿಗೂಢ ಸ್ತಂಭಗಳಿಗೆ ಆಕರ್ಷಣೆ ತುಂಬುತ್ತಾ, ತುಂಬುತ್ತಾ, ಸರಿ ಆಶಯವನ್ನು ಮರೆಯುವಂತೆ ಆಗದಿರಲಿ.
ಏನಾದರೂ ಮಾಡಲೇ ಬೇಕು ಅಂತಾದರೆ, ಕಾಡು ಉಳಿಸಿ, ತೇಜಸ್ವಿ ಪುಸ್ತಕಗಳನ್ನು ಕೊಳ್ಳಿರಿ, ಪರಿಸರ ಉಳಿಸಿ, ಬೆಳಸಿ, ಮಕ್ಕಳಿಗೆ ಒಂದಿಷ್ಟು ಅರಿವು ಮೂಡಿಸಿ, ಸಾತ್ವಿಕ ಬದುಕು ಬಾಳಿರಿ, ನೀವು ಬದುಕಿ ಪರರನ್ನು ಬಾಳಿಸಿ ಅಷ್ಟು ಮಾಡಿ ಸಾಕು. ಇದ್ದಾಗ ಯಾರ ಹಿಡಿತಕ್ಕೂ ಸಿಗದ ತೇಜಸ್ವಿಯನ್ನು ಈಗ ದಯವಿಟ್ಟು ನಿಮ್ಮ ಕೈಗೊಂಬೆ ಮಾಡಿಕೊಳ್ಳಬೇಡಿ.
Subscribe to:
Posts (Atom)