
ಇರುಳು ಕಳೆದು ಕೋಟಿ ಚುಕ್ಕಿಗಳ ಬೆಳಕಿನಿಂದ
ಮನೆ ಮನ ಬೆಳಗಿರಲು,
ಒಂಟಿತಾರೆ ದಿನಕರನ ಸಾಂಗತ್ಯವೇಕೆ?
ಬರಡು ಭೂಮಿಗೆ ನೀರುಣಿಸಿ ಸಕಲ ಚರಾಚರಕ್ಕೆ
ಜೀವಜಲವಾಗಿಹ ತುಂಗೆ ಇರಲು,
ತನ್ನೊಡಲಲ್ಲಿ ನೂರು ತುಂಗೆಯಯರನ್ನುಳ್ಳ
ಕಡಲ ಹಂಬಲವೇಕೆ?
ಗೋಳಿಮರದಿ ಕೂತ ಪುಟ್ಟ ಮಡಿವಾಳ ಹಕ್ಕಿಯ
ಇನಿದನಿ ಇಂಪಾಗಿರೆ,
ದೂರದೂರಿನ ಕೋಗಿಲೆಯ ಸ್ವರ ಆಲಿಸುವಾಸೆಯೇಕೆ?
ಮೈಮನಕೆ ಮುದ ನೀಡುವ ಪ್ರೀತಿಯ ಗುಡಿಸಿರಲು
ಕಾಣದೂರ ಹಂಗಿನರಮನೆಯ ವೈಭೋಗವೇಕೆ?
ಒಡಲಾಳದಲ್ಲಿ ಆರದ ಜ್ಞಾನಜ್ವಾಲೆ ಆವರಿಸಲು
ಉಳಿದ ಕಾಮತೃಷೆಯೇಕೆ?
ಮಲೆನಾಡಿನ ಮಗಳಾಗೆ ನಾ ಇರುವೆ, ನನ್ನ ಅಳಿವು ಉಳಿವು
ಗೆಲುವು ಸೋಲು, ನೋವು ನಲಿವಿಗೆ
ಪಂಚಭೂತಗಳೇ ಸಾಕ್ಷಿಯಾಗಿರಲಿ
ಎಲ್ಲಕ್ಕೂ ಅವುಗಳ ನೆರವಿರಲಿ, ನನ್ನಿ ಪರಿಸರ ತೊರೆಯುವ ಮುನ್ನ
ನನ್ನ ಈ ಆಕೃತಿ ಪ್ರಕೃತಿಯೊಂದಿಗೆ ಲೀನವಾಗಿರಲಿ