ನನದಲ್ಲದ ಕಾರಣಕ್ಕೆ ನಾನು ಕೆಲಸ ತೊರೆದ ಮೇಲೆ ಮನೆಯಲ್ಲಿ ಸಮಯದೂಡುವುದೇ ಕಷ್ಟವಾಗುತ್ತಿತ್ತು,. ಇಂಥ ಸಂದರ್ಭದಲ್ಲಿ ಸಿಕ್ಕವನು ನಿಶಾಂತ. ಅವನೆಂದರೆ ನನಗಷ್ಟೆ ಅಲ್ಲಾ ನನ್ನ ಗೆಳತಿಯರಿಗೂ ಏನೋ ಆಕರ್ಷಣೆ.
ಸೊಂಪಾಗಿ ಬೆಳೆದಿದ್ದ ತಲೆಕೂದಲನ್ನು ಹಿಂದಕ್ಕೆ ಹಾಕುತ್ತಾ ಹೇರ್ ಸ್ಟೈಲ್ ಸರಿ ಮಾಡಿಕೊಂಡು, ಗಡಸು ಧ್ವನಿಯಲ್ಲಿ ಅವನು ಸ್ವರಚಿತ ಗೀತೆಗಳ ಹಾಡುತ್ತಿದ್ದರೆ, ಎಲ್ಲರೂ ಮರುಳಾಗಿಬಿಡುತ್ತಿದ್ದರು. ಆದರೆ, ಅವನೇನೂ ಯಾರೊಂದಿಗೂ ಫ್ಲರ್ಟ್ ಮಾಡಿದವನಲ್ಲ.
ತನ್ನ ವೃತ್ತಿ, ಸಾಹಿತ್ಯ ಲೋಕವನ್ನು ಇಷ್ಟಪಡುವ ನಿಶಾಂತ ಎಲ್ಲರೊಡನೆ ಬೆರತರೂ ಸದಾ ಏಕಾಂಗಿಯಾಗಿ ಕಾಣುತ್ತಿದ್ದ. ಅವನೊಂದಿಗೆ ದಿನವಿಡೀ ಹರಟೆ ಹೊಡೆಯುವುದು ಈಗಲೂ ನನ್ನ ನೆಚ್ಚಿನ ವಿಷಯ. ನಮ್ಮ ಮಾತುಕತೆಯಲ್ಲಿ ಇಡೀ ವಿಶ್ವದ ಆಗು ಹೋಗುಗಳು ಆವರಿಸಿರುತ್ತಿತ್ತು.
ಮಲ್ಲಿಕಾಳ ಮೈಮಾಟದಿಂದ ಹಿಡಿದು ಶಂಕರರ ಅದ್ವೈತ, ಶಿಕ್ಷಣ ಪದ್ಧತಿ, ಬೇಂದ್ರೆ ಕವನ, ಕುವೆಂಪು ಕಥನ, ಕಾರಂತರ ಸುತ್ತಾಟ, ತೇಜಸ್ವಿ ಜೀವನ ಸರಸ ಎಲ್ಲವೂ ಸುಳಿದಾಡುತ್ತಿತ್ತು. ಒಟ್ಟಿನಲ್ಲಿ ಅವನೊಟ್ಟಿಗೆ ಮಾತಾಡುತ್ತಾ ದಿನಕ್ಕೊಂದು ಹೊಸ ವಿಷಯವನ್ನು ಗ್ರಹಿಸುವುದು ನನಗೆ ಇಂದಿಗೂ ಖುಷಿ ಕೊಡುತ್ತದೆ.
ನಿಶಾಂತ ಹಾಗೂ ನನ್ನ ಗೆಳೆತನ ಹಲವರ ಕಣ್ಣು ಕುಕ್ಕುತ್ತಿತ್ತು. ನಿಶಾಂತನನ್ನು ನನಗೆ ಪರಿಚಯಿಸಿದ ನಮ್ಮ ಸಹಕಾರ ಸಂಘದ ಅಧ್ಯಕ್ಷ ಮಿತ್ರ ಸುರೇಶ್ ನಾಯಕ ಕೂಡಾ ಅವನು ಸರಿಯಿಲ್ಲ ಎಂದು ಏನೇನೋ ಹೇಳಿದ್ದ. ನನ್ನ ಗೆಳತಿ ಕೋಮಲಾಳಿಗೂ ಕೂಡಾ ನಿಶಾಂತ ನಿನ್ನ ಮಾತ್ರ ಮಾತಾಡಿಸುತ್ತಾನೆ ಬರೀ. ನಾವೆಂಥ ಮಾಡಿದ್ದೀವಿ ಮಾರ್ರಾಯ್ತಿ ಎಂದು ಗೊಣಗುತ್ತಿದ್ದಳು.
ಮೊಬೈಲ್ ಕಾಣದ ಆ ದಿನಗಳಲ್ಲಿ ನಿಶಾಂತನ ದೆಸೆಯಿಂದ ಮೊಬೈಲ್, ಮೆಸೇಂಜಿಂಗ್ , ಟಾಕಿಂಗ್ ಎಲ್ಲವೂ ವೇದ್ಯವಾಯಿತು. ಮೊಬೈಲ್ ಬಿಲ್ ಕೂಡಾ ಅವನೇ ಕಟ್ಟುತ್ತಿದ್ದ. ಕೆಲವೊಮ್ಮೆ ನಿಶಾಂತ ಮಾತಿಗಿಂತ ಹೆಚ್ಚು ಮೌನಕ್ಕೆ ಶರಣಾಗುತ್ತಿದ್ದ. ಹುಡುಗರೂ ಈ ರೀತಿ ವೇದನೆ ಪಡುತ್ತಾರಾ ಎಂದೆನಿಸಿಬಿಡುತ್ತಿತ್ತು. ಕಾಲೇಜು ದಿನಗಳಿಂದ ಹಿಡಿದು ಇಂದಿನ ವರೆಗಿನ ಆತನ ಪ್ರೇಮ ಪ್ರಕರಣಗಳನ್ನು ಒಂದೊಂದಾಗಿ ಹೇಳತೊಡಗಿದ್ದ.
ಇವನ ಹಿಂದೆ ಬಿದ್ದ ಹುಡುಗಿಯರ ಪಟ್ಟಿ ಅವರ ಬೇಡಿಕೆಗಳು, ಜೀವನದ ಅರ್ಥ ಗೊತ್ತುಗುರಿಯಿಲ್ಲದ ಇಂದಿನ ಪ್ರೇಮಿಗಳ ಬಗ್ಗೆ ಗಂಟೆಗಟ್ಟಲೆ ಹೇಳುತ್ತಿದ್ದ. ನನಗೋ ಇವೆಲ್ಲವೂ ಹೊಸ ಕಥೆಗಳು ಆಸಕ್ತಿಯಿಂದ ಕೇಳುತ್ತಿದ್ದೆ. ಆಗಾಗ ಇದಕ್ಕೆ ಏನು ಪರಿಹಾರ ಎನ್ನುತ್ತಿದ್ದ.. ನಾನೇನು ಹೇಳಲಿ.. ನನ್ನದೋ ಬರೀ ಪುಸ್ತಕ ಜ್ಞಾನ. ಕೆಲವೊಮ್ಮೆ ಅವನು ಪ್ರಶ್ನೆ ಮೇಲೆ ಪ್ರಶ್ನೆ ಎಸೆಯುತ್ತಿದ್ದರೆ ನನಗೆ ಏನು ಹೇಳಲು ತೋಚುತ್ತಿರಲಿಲ್ಲ.
ಒಂದು ದಿನ ಬಂದವನೇ ಮತ್ತೆ ಮುಂದೆ ಏನು ಯೋಚ್ನೆ ಮಾಡಿದ್ದೀಯಾ? ಅಂದಾ.. ನಾನು ಕೇಳ್ದೆ ಯಾವುದರ ಬಗ್ಗೆ ಜೀವನದ ಬಗ್ಗೆ.. ಮದ್ವೆನಾ ಅಥವಾ ಕೆಲಸನಾ ಮದ್ವೆ ಬಗ್ಗೆ ಮನಸ್ಸಿಲ್ಲ.. ಕೆಲಸ ಮಾಡ್ಬೇಕು ಆಂದ್ರೆ ಹಳೆ ಫೀಲ್ಡ್ ಬೇಡ ಅಂದೆ ಆಯ್ತು ಎಂದು ತನ್ನ ಬೈಕ್ ಹತ್ತಿ ಹೊರಟುಬಿಟ್ಟ.
ವಾರದೊಳಗೆ ನನಗೊಂದು ಕೆಲ್ಸ ಸಿಕ್ಕಿತ್ತು. ಅದು ನನ್ನ ನೆಚ್ಚಿನ ಕ್ಷೇತ್ರದಲ್ಲೇ.. ಕೃಷಿ ಇಲಾಖೆ ಸಂಶೋಧನೆ..ನಮ್ಮೂರಿನಿಂದ ಮೂರ್ನಾಲ್ಕು ಗಂಟೆ ಹಾದಿ ಮನಸ್ಸು ಹರುಷದಿಂದ ಹಾರಾಡುತ್ತಿತ್ತು.
ನಿಶಾಂತನ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಆಸೆ ಹುಟ್ಟಿಕೊಂಡಿತ್ತು. ಆದರೆ, ಎಲ್ಲಾ ಸ್ತರದಲ್ಲೂ ನನಗಿಂತ ಒಂದು ಹೆಜ್ಜೆ ಮುಂದಿದ್ದ ಅವನಿಗೆ ನಾನು ಏನು ತಾನೇ ನೀಡಲು ಸಾಧ್ಯ ಎನಿಸಿತ್ತು. ಆದರೆ, ನಿಶಾಂತ ಸಾಹಿತ್ಯ ಹಾಗೂ ಹಾಡುಗಾರಿಕೆ ಕ್ಷೇತ್ರದಲ್ಲಿ ಮೇಲಕ್ಕೆ ಬರಲು ನಾನು ಅಲ್ವಸ್ವಲ್ಪವಾದರೂ ಸಹಾಯ ಮಾಡುವ ಎಂದು ಎನಿಸಿತು.
ಹಾಗೂ ಹೀಗೂ ಅಪ್ಪನ ಶಾಲೆ ಕಾರ್ಯಕ್ರಮಕ್ಕೆ ಬಂದಿದ್ದ ನಮ್ಮ ಸೀಮೆಯ ಈಗ ರಾಜ್ಯದ ಪ್ರಮುಖ ಸಾಹಿತಿ, ಸಂಗೀತ ನಿರ್ದೇಶಕ ಎನಿಸಿರುವ ಮಹಾನುಭಾವನನಿಗೆ ಕಾಲ್ ಮಾಡಿ ಭೇಟಿ ಮಾಡುವುದಾಗಿ ಕೇಳಿಕೊಂಡೆ. ನಿಶಾಂತ ನಾನು ಬೈಕ್ ನಲ್ಲಿ ಸ್ವಲ್ಪ ದೂರದಿದ್ದ ಅವ್ರ ಮನೆಗೆ ಹೋಗಿ ಬಂದೆವು. ನಿಶಾಂತನ ಸಾಹಿತ್ಯ ಇಷ್ಟಪಟ್ಟ ಸಾಹಿತಿ ಮುಂದೆ ಎಂದಾದರೂ ಬಳಸುವುದಾಗಿ ಹೇಳಿದರು.
ಮುಂದೆ ನಿಶಾಂತ ಅವರೊಂದಿಗೆ ಸಂಪರ್ಕದಲ್ಲಿದ್ದ, ಆದರೆ, ಆ ಸಾಹಿತಿಯ ರಚನೆಗಳೂ ಕೂಡಾ ಬೇರೆಡೆಯಿಂದ ನಕಲು ಮಾಡಿದ್ದು, ಪ್ರಭಾವಿತವಾಗಿದ್ದು ಎಂಬುದು ಅರಿತ ನಿಶಾಂತ ಅದನ್ನು ಅವರಿಗೆ ತಿಳಿಸುವ ಧೈರ್ಯ ಮಾಡಿದ್ದೆ ತಪ್ಪಾಯಿತು. ಮತ್ತೆ ಆ ಸಾಹಿತಿ ನಿಶಾಂತನ ಭೇಟಿ ಮಾಡಲೆ ಇಲ್ಲವಂತೆ. ಹೋಗ್ಲಿ ಬಿಟ್ಟಾಕು ನನಗೇನು ಹೆಚ್ಚಿಗೆ ನಿರೀಕ್ಷೆ ಇರಲಿಲ್ಲ ಎಂದು ಬಿಟ್ಟ.
ಮುಂದೆ ಒಂದು ದಿನ ಇದ್ದಕ್ಕಿದ್ದಂತೆ ಸಂಜೆ ಸಿಗ್ತೀಯಾ ಒಂದು ವಿಷ್ಯ ಹೇಳ್ಬೇಕು ಅಂದಾ. ನನಗೇನೋ ಅವನು ಹೇಳೋ ವಿಷ್ಯದ ಸುಳಿವು ಮನಸ್ಸಿನಲ್ಲಿ ಓಡಾಡತೊಡಗಿತು. ನಿರೀಕ್ಷೆಯಂತೆ ಅವನು ತನ್ನ ಮದುವೆ ಬಗ್ಗೆ ಪ್ರಸ್ತಾಪಿಸಿದ.
ನನಗೆ ಸಕತ್ ಖುಷಿಯಾಯ್ತು. ತನ್ನ ವೃತ್ತಿ, ಪ್ರವೃತ್ತಿಯನ್ನು ಮೆಚ್ಚುತ್ತಾ ಆತನನ್ನು ಪ್ರೋತ್ಸಾಹಿಸಿದ್ದವಳನ್ನೇ ಆರಿಸಿದ್ದ. ನನ್ನ ಊಹೆಯಂತೆ ಸ್ಮಿತಾ ಅವನಿಗೆ ತಕ್ಕ ಜೋಡಿಯಾಗಿದ್ದಳು. ಮಿತಭಾಷಿ ಸ್ಮಿತಾಳನ್ನು ಒಂದೆರಡು ಸಲ ಕಂಡಿದ್ದೆ ಅಷ್ಟೇ. ಆದರೆ, ಸ್ಮಿತಾಳ ಬಗ್ಗೆ ನಿಶಾಂತ ತೋರುತ್ತಿದ್ದ ಕಾಳಜಿ ಕಂಡು ನನಗಸಿತ್ತು ಎಂಥಾ ಜೋಡಿ ಎಂದು. ಆದರೆ ನಿಶಾಂತನಿಗೆ ಆ ಬಗ್ಗೆ ಹೇಳಿರಲಿಲ್ಲ.
ಎಲ್ಲವೂ ಸುಖಾಂತ್ಯ ಎಂದು ಕೊಂಡಿದ್ದ ಸಮಯದಲ್ಲಿ ಸ್ಮಿತಾಳಿಗೆ ವಿದೇಶದಲ್ಲಿ ಕೆಲ್ಸ ಸಿಕ್ಕಿತ್ತು. ವಿಧಿ ಇಲ್ಲದೆ ನಿಶಾಂತ ಕೂಡಾ ಜೊತೆ ತೆರಳಿದ.. ಅಲ್ಲಿಗೆ ಹೋದ ಮೇಲೂ ನನ್ನ ಸಂಪರ್ಕದಲ್ಲಿದ್ದ. ಆದರೆ, ಈಗ ಆತ ಕೂಡಾ ತನ್ನ ಸಂಸಾರದಲ್ಲಿ ಮುಳುಗಿದ್ದಾನೆ.. ಮತ್ತೆ ನನ್ನ ಪ್ರಜ್ಞೆಯಂತಿದ್ದ ಗೆಳೆಯನ ನಿರೀಕ್ಷೆ ಮಾತ್ರ ಹಾಗೆ ಇದೆ..