page1

Pages

Sunday, February 17, 2008

ಬರವಣಿಗೆ ಅನಿವಾರ್ಯ ಕರ್ಮ

ಬರವಣಿಗೆ ಅನಿವಾರ್ಯ ಕರ್ಮ ಎನಿಸಿದ ಮೇಲೆ, ಬರೆದ ಅಕ್ಷರಗಳು ಮನತಣಿಸ ಹೋದರೆ ಸುಮ್ಮನೆ ಅದನ್ನು ಹೊರಗೆಡವುದರಲ್ಲಿ ಯಾವುದೇ ತೃಪ್ತಿ ಇರದು. ಯಾಕೊ ಮನಸ್ಸು ಒಮ್ಮೊಮ್ಮೆ ಖಾಲಿ ಖಾಲಿ ಎನಿಸಿಬಿಡುತ್ತದೆ.

ಯಾವ ವಿಷಯವೂ ರುಚಿಸದಂತೆ, ಎಲ್ಲದರಲ್ಲೂ ನಿರಾಸಕ್ತ ಭಾವ ಮೂಡಿದಂತೆ, ಏನನ್ನೊ ಹುಡುಕುತ್ತಾ, ಮತ್ತೇನನ್ನೊ ಪಡೆಯುತ್ತಾ, ನಡುವೆ ಇನ್ನೇನ್ನನೊ ಕಳೆದುಕೊಳ್ಳುವ ಈ ಜೀವನ ಎಂಬ ವಿಸ್ಮಯ ಪರಿಕ್ರಮಕ್ಕೆ ಸಾಷ್ಟಾಂಗ ನಮಸ್ಕಾರ ಹೇಳಬೇಕೆನಿಸುತ್ತದೆ.

ಬರವಣಿಗೆಗೆ(ಬರೆಯೋದಕ್ಕೆ) ಒಂದು ನೆಪ ಬೇಕೇ? ಎಷ್ಟೊ ಸಾರಿ ನನಗೆ ನಾನೇ ಕೇಳಿಕೊಂಡ ಪ್ರಶ್ನೆ. ಹಾಗಂತ ಅನಿಸಿದ್ದೆಲ್ಲದ್ದಕ್ಕೆ ಅಕ್ಷರ ರೂಪನೀಡುತ್ತಾ ಹೋದರೆ, ಮಿತಿಯಿರದ ಪುಟಗಳ ಲೆಕ್ಕಾಚಾರದಲ್ಲಿ ಕಳೆದುಹೋಗುವ ಭಯ ಕಾಡುತ್ತದೆ. ಹೌದು ಮನುಷ್ಯನಿಗೆ ಭಯ ಯಾಕಾದರೂ ಕಾಡುತ್ತದೆ.

ಏನಾದರೂ ತಪ್ಪು ಮಾಡಿದಾಗ, ತಪ್ಪು ಮಾಡೋದು ಯಾವಾಗ ಮನಸ್ಸಿನಲ್ಲಿ ಕೆಟ್ಟ ಅಲೋಚನೆ ಉಂಟಾದಾಗ. ಒಂದು ಸಿದ್ಧಾಂತದ ಪ್ರಕಾರ 'ಮನಸ್ಸಿನಲ್ಲಿ ಉಂಟಾಗುವ ಕೆಟ್ಟ ಅಲೋಚನೆಗಳಿಗೆ ಮೂಲ ಕಾರಣವೇ ಭಯ ಅಂತೆ' . ಭಯ ಅಥವಾ ಯಾವುದೇ ಫೋಬಿಯಾ ಬಗ್ಗೆ ವಿಸ್ತಾರವಾಗಿ ಬರೆದು ನಿಮಗೆ ಭಯ ಹುಟ್ಟಿಸುವುದಿಲ್ಲ ಬಿಡಿ.

ಮನಸ್ಸಿನಲ್ಲಿ ಬರುವ ಕಲ್ಪನೆ, ಕನಸಾಗಿ, ಕನಸು ಪದಗಳಾಗಿ, ಪದಗಳು ಪ್ಯಾರಗಳಾಗಿ ದೊಡ್ಡ ಲೇಖನವಾಗಿ ಸಾವಿರಾರು ಜನ ಓದಿ, ಅದರಿಂದ ಎಲ್ಲರ ತಲೆಯಲ್ಲೂ ಉಂಟಾಗುವ ಅಥವಾ ಬರುವ ನಾನಾ ಆಲೋಚನೆಗಳ ಜಾಲದೊಳಗೆ ಬಂಧಿತಳಾದ ಮೇಲೆ ಬರೆಯದೇ ಸುಮ್ಮನೆ ಕೂತರೆ ನಾನಾ ಓದುಗರ ವಿಭಿನ್ನ ಆಲೋಚನಾ ಕ್ರಮಕ್ಕೆ ಧಕ್ಕೆ ಉಂಟು ಮಾಡಿದಂತೆಯೇ ಸೈ.

ಎಲ್ಲಾ ಓದುಗರ ಸ್ತರಕ್ಕೆ ಮುಟ್ಟಲಾಗದಿದ್ದರೂ 'ಇವರು ಇಂದು ನೋಡಿದ್ದಾರೆ ಈ ಲೇಖನನಾ', 'ಅವರು ಏನೋ ನಾಲ್ಕು ಸಾಲು ಬರೆದಿದ್ದಾರೆ ಇದರ ಬಗ್ಗೆ' ಅನ್ನೊ ಸಣ್ಣ ಖುಷಿ, ಉತ್ಸಾಹವೇ ಮುಂದಿನ ಪ್ರತಿ ಲೇಖನಕ್ಕೆ ನಾಂದಿ ಹಾಡುತ್ತದೆ ಎನ್ನುವುದು ಸುಳ್ಳಲ್ಲ.

ಹಾಗೆ ನೋಡಿದರೆ ನಮ್ಮ ಪ್ರತಿಯೊಂದು ಕ್ರಿಯೆಯ ಫಲಿತಾಂಶ ಅಡಕವಾಗಿರುವುದು ಅದರ ಹಿಂದಿನ ಪ್ರೇರಕ ಶಕ್ತಿಯಿಂದ, ಉತ್ಸಾಹದಿಂದ. ಉತ್ಸಾಹ/ಲವಲವಿಕೆ ಇದ್ದರೆ ಶ್ರದ್ಧೆ ಮೂಡುತ್ತದೆ. ಶ್ರದ್ಧೆ ಬಂದರೆ ಜ್ಞಾನ ಸಿಗುತ್ತದೆ. ಒಮ್ಮೆ ಜ್ಞಾನಿಯಾದ ಮೇಲೆ ಅವನಿಗೆ ಕರ್ಮದ ಯಾವುದೇ ಬಂಧನವಿರುವುದಿಲ್ಲ.

ಹಾಗಂತ ಪಡೆದ ಜ್ಞಾನವನ್ನು ಹಂಚದೆ ಹೋದರೆ, ಅದು ತಪ್ಪಾಗುತ್ತದೆ. ಒಟ್ಟಿನಲ್ಲಿ ಸೂಕ್ಷ್ಮವಾಗಿ, ಸ್ಥೂಲವಾಗಿ ಹೇಳಬೇಕೆಂದರೆ, ತಿಳಿದಿದ್ದನ್ನು ತಿಳಿಯದವರಿಗೆ ತಿಳಿ ಹೇಳೋ ಕಾಯಕನಾ ಜೀವನ ಪರ್ಯಂತ ಮುಂದುವರೆಸುವುದರಲ್ಲೇ ಇದೆ ನಿಜವಾದ ಆನಂದ.

ಹ್ಞು...ಇಷ್ಟೆಲ್ಲಾ ಪೀಠಿಕೆ ಯಾಕಾದರೂ ಬರೆದೆ ಎಂದು ಒಮ್ಮೆ ಅವಲೋಕಿಸಿದಾಗ ಕಾಣುವುದು ಒಂದೇ. ಬ್ಲಾಗ್ ಅಂಥಾ ಒಂದು ಸೃಷ್ಟಿ ಮಾಡೋದು ಮುಖ್ಯ ಅಲ್ಲ ಅದನ್ನು ಸಾಕಿ ಸಲುಹುವುದು ಕೂಡ ಅಷ್ಟೇ ಮುಖ್ಯ ಅಂತಾ. ಸಹೃದಯ ಮಿತ್ರರ ಆಣತಿಯಂತೆ ಉಪವಾಸ ಮುಗಿಸಿ ಮತ್ತೆ ಅಕ್ಷರದೊಡನೆ ಕಾದಾಟಕ್ಕೆ ಸಿದ್ಧಳಾಗುತ್ತಿದ್ದೇನೆ. ಸ್ವಲ್ಪ ಬಿಡುವು ಕೊಡಿ..........(ಅರೆ..ಬಿಡುವು ಯಾರನ್ನು ಕೇಳುತ್ತಿದ್ದೇನೆ..ಯಾವುದರಿಂದ ಅಂಥಾ ಒಮ್ಮೆ ನಗು ಬಂತು.. ಕ್ಷಮಿಸಿ)

ಸುಮ್ಮನೆ ಕಾಲಹರಣಕ್ಕೆಂದು ಗೀಚಿದ ಸಂಚಾರ ವಾಣಿಯಲ್ಲಿ ಕಂಡ ನಾಲ್ಕಾರು ಎಸ್ಸೆಎಂಎಸ್ ಸಂದೇಶಗಳ ಕನ್ನಡೀಕರಣ ಸಾಲುಗಳು ನೀಡುತ್ತಿರುವೆ. ಕ್ಷಮಿಸಿ ಇವು ಯಾವುದು ಸ್ವಂತದಲ್ಲ. ಗೆಳೆಯ ಕಳಿಸಿದ ಪರಭಾಷೆಯ ಸಂದೇಶದ ಕನ್ನಡರೂಪ ಅಷ್ಟೇ.

ನನ್ನ ಇನಿಯ ತೊರೆದನು ನನ್ನ ಕೆಲ ಕ್ಷಣ
ದೂರಾಗಿ ಸನಿಹವಾದ ಎಂದಿತು ಮನ
ಅವನ ನೆನೆಯದೇ ಇರದ ಕ್ಷಣವೂ ಕ್ಷಣವಲ್ಲ
ಹೃದಯದಿ ನೆಲೆಸಿಹ ಅವನು ನನಗೆ ಕ್ಷಣಿಕವಲ್ಲ
*********
ವಿರಕ್ತನಾಗಿ ಈ ಬದುಕಿನಿಂದ ನಾನು ಮುಕ್ತಿಹೊಂದಿದ ಮೇಲೆ
ನನಗೆ ಸಂದೇಶ ಕಳುಹಿಸದೆ ಈಗ ನೀನು ಉಳಿಸುತ್ತಿರುವ ಹಣದಿಂದ
ನನಗಾಗಿ ಶ್ವೇತ ಪುಷ್ಪಗಳ ಖರೀದಿಸಿ ಅರ್ಪಿಸು ಗೆಳೆಯ
*********
ನೆನ್ನೆಯ ತಪ್ಪುಗಳ ನಡುವೆ, ನಾಳೆಯ ಭರವಸೆಗಳ ನಡುವೆ
ಅವಕಾಶಗಳ ಮೂಟೆ ಹೊತ್ತು ಇಂದು ನಿಮ್ಮ ಮುಂದಿದೆ
ಈ ಅವಕಾಶವ ಜೀವನದಲ್ಲಿ ಸರಿಯಾಗಿ ಉಪಯೋಗಿಸಿಕೊಳ್ಳಿ.
*********
ಬರೆದೆ ನಿನ್ನ ಹೆಸರ ಮರಳ ಮೇಲೆ
ನೀರಿನ ಅಲೆ ಬಂದು ಕೊಚ್ಚಿ ಹೋಯ್ತು
ಬರೆದೆ ನಿನ್ನ ಹೆಸರ ಗಾಳಿಯ ಮೇಲೆ
ಬಿರುಗಾಳಿ ಬಂದು ತೂರಿ ಹೋಯ್ತು
ಕಡೆಗೆ ನಿನ್ನ ಹೆಸರ ಬರೆದೆ ನನ್ನ ಹೃದಯದಿ
ಪಾಪಿ! ನಿನ್ನ ಹೆಸರ ಬರೆದಿದ್ದಿದ್ದೆ ತಡ ಹೃದಯಬಡಿತ ನಿಂತೊಯ್ತು.
***********

Monday, December 31, 2007

ಹೊಸ ವರ್ಷದ ಬಂದಿದೆ ಮತ್ತೆ


ನಾಳೆ ಹೊಸವರ್ಷ ಕಣೇ, ಬೇಜಾನ್ ಪ್ರಿಪರೇಷನ್ ಮಾಡ್ಕೋಬೇಕು, ನೀನು ಬರ್ತೀಯಾ ತಾನೇ? ಹೀಗೆ ಒಂದು ಸಮನೆ ಸಾಗಿತ್ತು ಅವಳ ಲಹರಿ. ಹ್ಞು... ನೋಡೋಣ ಎಂದು ಫೋನಿಟ್ಟೆ. ನಂತರ ಯೋಚಿಸತೊಡಗಿದೆ ಏನಾಗಿದೆ ಇವಳಿಗೆ ಮೊದಲೆಲ್ಲಾ ಹೀಗಿರಲಿಲ್ಲ., ಸಿಟಿ ಗಾಳಿ ಸೋಕಿದ ಮೇಲೆ ಎಂಥಾಯ್ತೋ ಏನೋ ಕಾಣೆ.

ನಮ್ ಜನನೂ ವಿಚಿತ್ರ ಬಿಡಿ. ಹೊಸ ವರ್ಷ ಅಂಥಾ ಏಂತಿಕ್ಕೆ ಆಚರಿಸುತ್ತಾರೋ ಗೊತ್ತಿಲ್ಲ. ನಾಳೆ ಏನು ಋತು ಬದಲಾಗಲ್ಲ. ಚಳಿ ಕಮ್ಮಿಯಾಗಲ್ಲ, ಬಿಸಿಲು ತಂಪಾಗಲ್ಲ, ಕೋಗಿಲೆ ಏನೂ ಸಪ್ತಸ್ವರ ಹೊರಡಿಸೋಲ್ಲ, ಮನುಷ್ಯ ಅಂತೂ ಬದಲಾಗಲ್ಲ. (ಉದ್ದುದದ ಬದಲಾವಣೆ ಪಟ್ಟಿ ತಯಾರಿಸಿಟ್ಟಿಕೊಂಡರೂ) ಏನಿಲ್ಲ ಮತ್ತೆ ಯಾತರದ್ದು ಈ ಹೊಸ ವರ್ಷ ಬರೀದೆ ಕ್ಯಾಲೆಂಡರ್ ಅಂಕಿ ಬದಲಾಗೊದಕ್ಕೆ ಇಷ್ಟೊಂದು ಸಂಭ್ರಮನಾ, ಮೂರ್ಖತನದ ಪರಮಾವಧಿ ಅನಿಸಿತು ನಂಗೆ.

ಊರಲ್ಲಿ ಇದ್ದಿದ್ದರೆ ಈ ಪರಿ ಯೋಚನೆ ಬರೋ ಮಾತೇ ಇಲ್ಲ. ಯಾಕೆಂದರೆ ಅಲ್ಲಿ ಈ ಪರಿ ಹುಚ್ಚಾಪಟ್ಟೆ ಸಂಭ್ರಮದ ಹೊಸ ವರ್ಷವಂತೂ ಕಾಣೆ.

ನಾನು ಈ ಬ್ಲಾಗಿನ ಹೊಟ್ಟೆಗೆ ಅಕ್ಷರ ತುಂಬಿಸದೆ ಬಹುದಿನ ಉಪವಾಸ ಇಟ್ಟಿದ್ದೆ...ಪಾಪ. ಹೊಸ ವರ್ಷದ ಸಂಭ್ರಮದಲ್ಲಿ ಅದರ ಹೊಟ್ಟೆನು ಸ್ವಲ್ಪ ತುಂಬಲಿ ಅಂತ ಬರಿತ್ತಾ ಇದ್ದೀನಿ...

ವಸಂತ ಮಾಸದ ಕೋಗಿಲೆ ಗಾನವ ಮುದದಿ ಕೇಳುತ್ತಾ, ಚಿಗುರೆಲೆಯ ಹಸಿರು ತೋರಣ ಕಟ್ಟುತ್ತಾ, ಮನೆ ಮುಂದಣ ರಂಗೋಲಿಗೆ ಬಣ್ಣ ತುಂಬುತ್ತಾ,ಎಲ್ಲೆಡೆ ಹೊಸ ಬಗೆಯ ನೋಟವ ಕಾಣುತ್ತಾ ಆಚರಿಸುವ ಹಬ್ಬವೇ ಹೊಸ ಹಬ್ಬ ಎನ್ನುವುದು ಒಂದರ್ಥದಲ್ಲಿ ಸಮಂಜಸವೇ.

ಆದರೆ, ಯುಗದ ಆದಿ ಯುಗಾದಿ ಎಂದು ನಾವು ಯುಗಾದಿಯ ರೀತ್ಯ ಕಾಲ, ಮಾಸ ತಿಥಿಗಳನ್ನೆನ್ನೂ ಅನುಸರಿಸುತ್ತಿಲ್ಲವಲ್ಲ. ಹೆಚ್ಚಿನವರ ದಿನಚರಿ ನಡೆಯುವುದು ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷದ ದಿನ ಎಂದು ಕ್ಯಾಲೆಂಡರ್ ನಲ್ಲಿ ಹಾಕಿರುವಾಗ ನಾವು ಆಚರಿಸದಿದ್ದರೆ ಹೇಗೆ ಅಲ್ವಾ.ಆದರೆ ಆಚರಿಸುವ ಪರಿ ಹೇಗೆ? ನಂಗಂತೂ ಹೊಸದು, ನನ್ನ ಸ್ನೇಹಿತೆಗೆ ಕರೆ ಮಾಡಿದೆ.

ಅವಳು ಹೇಳಿದ್ದೆಲ್ಲಾ ಕೇಳಿದ ಮೇಲೆ ನನಗನಿಸಿದ್ದು, ಹೊಸ ವರ್ಷದ ಮೋಜು ಬರೀ ಕ್ಷಣಿಕ, ಆದರೆ ಅದರ ಸವಿ ಕೊನೆತನಕ. ಇಷ್ಟವಿದ್ದವರು ಅವರವರ ಶಕ್ತ್ಯಾನುಸಾರ ಆಚರಿಸಲಿ, ಮದ್ಯದ ಹೊಳೆ ಹರಿಸಿ ತೇಲಲಿ, ಮುಳುಗಲಿ, ಕಾಡಿನಲ್ಲಿ ಬೆಂಕಿ ಹಚ್ಚಿ ಕುಣಿಯಲಿ, ಬಟ್ಟೆ ಹರಿದುಕೊಂಡು ಕೇಕೇ ಹಾಕಲಿ, ಬೀಚಿನಲ್ಲಿ ಸುತ್ತಲಿ, ಕಂಬಳಿ ಹೊದ್ದು ಮಲಗಲಿ, ಲಿಂಗಬೇಧ ಮರೆತು ಕಲೆಯಲಿ, ಮೆರೆಯಲಿ, ಕೊರಗಲಿ, ಕೊಳತು ನಾರಲಿ, ಸಾಕಪ್ಪ ಸಾಕು ಈ ನಗರ ಜೀವಿಗಳ ವರ್ಷಾಚರಣೆಯ ಸಂಭ್ರಮ.

ಇದರ ಮಧ್ಯ ಕೆಲವು ದೇವಾನುದೇವತೆಗಳಿಗೆ ನೈಟ್ ಶಿಫ್ಟ್ ಬೇರೆ ಅಂತೆ. ವಿಶೇಷ ಪೂಜೆ, ಆರಾಧನೆ. ರಾಮ ರಾಮ. ಅವರವರ ಭಾವಕ್ಕೆ ಅವರವರ ಭಕುತಿಗೆ, ಏನಾದರೂ ಮಾಡಿಕೊಳ್ಳಿ.

ಹಬ್ಬ ಮಾಡೋದರಿಂದ ನಷ್ಟವೇನೂ ಇಲ್ಲ. ಆದರೆ ನಾಳೆ ದಿನ ಅದೇ ಕಷ್ಟ ಆಗಬಾರದು ಅಷ್ಟೆ. ಎಲ್ಲರಿಗೂ ತಿಳಿ ಹೇಳೋ ಯಜಮಾನತಿ ನಾನೇನಲ್ಲ. ಆದರೆ, ಪ್ರತಿ ನಿತ್ಯ ನಮಗಾಗಿ ಸಿಗುವ ಪ್ರತಿ ಕ್ಷಣವನ್ನು ಹೊಸತನಕ್ಕೆ ತಿರುಗಿಸೋಣ, ಹೊಸ ಅವಧಿಯನ್ನು ಹೊಸತನದಿಂದ ರೂಪಿಸಿ, ಪ್ರತಿ ದಿನವನ್ನು ಹೊಸ ದಿನ ಮಾಡೋಣ.

ನಾಳೆಯ ಚಿಂತೆ ಬಿಟ್ಟು, ಇಂದು ಜೀವಿಸೋಣ ಆನ್ನೊ ಪಾಲಿಸಿ ನಂದು. ಅರ್ಥವಿಲ್ಲದ ಆಚರಣೆಯಿಂದ ವ್ಯರ್ಥವಾಗುವ ಸಮಯದ ಸದುಪಯೋಗ ಮಾಡಿಕೊಳ್ಳೊದು ಒಳಿತು ಅನ್ನಿಸುತ್ತದೆ. ಎನಿವೇ,
೨೦೦೮ ನೇ ಹೊಸ ವರ್ಷದ ಶುಭಾಶಯಗಳು.

Friday, July 20, 2007

ನೆನಪು

ಮನದಂಗಳದ ನಿತ್ಯ ಸಂಚಾರಿ
ನೋವ ಮರೆಸುವ ಮನೋಹಾರಿ
ಅರಿಯದೆ ಹೋದೆ ನಾ ನಿನ್ನ ದಾರಿ.
ಮೂಡಿಸದೆ ನಿನ್ನ ಹೆಜ್ಜೆ ಗುರುತು ಅರಿವಿನ ಮಾರ್ಗ ತೋರಿದೆ.
ಕೈಗೆಟುಕದ ಮಾಯಾ ಜಿಂಕೆ
ಮಿಂಚಂತೆ ಸುಳಿದೆ ಮೋಡದಂತೆ ಮನ ಕರಗಿಸಿದೆ
ಸುಖದ ಮಳೆ ಸುರಿಸಿದೆ.
ಮಳೆಯ ಕೊನೆ ಹನಿ ಧರೆಯ ಸೇರೋ ಮೊದಲು ಮರೆಯಾದೆ.
ಎಲ್ಲಿ ಹೋದೆ ಏಕೆ ಹೋದೆ ಎತ್ತ ಹೋದೆ ತಿಳಿಯದಾದೆ.
ಬಿಡು ಮೊದಲು ನಿನ್ನ ಕಾಣಲಿಲ್ಲ
ಇಂದು ಕಾಣೋ ಮನಸಿಲ್ಲ.
ಮನದಮೂಲೆಯಲ್ಲಿ ಸುಪ್ತವಾಗಿ ಹರಿಯಲಿ ನಿನ್ನ ನೆನಪು ,
ನಿನ್ನೊಡನೆ ಕಳೆದ ಸವಿನೆನಪ ಹಿಂದುರುಗಿಸು ಮರೆಯದೆ

Sunday, May 27, 2007

ಛೇ!! ಹೀಗೇಕಾಯ್ತು

ಹೊಂಬೆಳಕ ಕಿರಣದಿ ಕಂಡಳು ಅವಳು
ಮುಂಜಾನೆಯಲ್ಲೂ ನಶೆ ಏರಿಸಿದಳು ನನ್ನೊಳು
ತುಂತುರು ಮಳೆಯ ಮನದಿ ತಂದಳು
ಹುದುಗಿದ್ದ ಆಸೆಗಳ ಚಿಗುರಿಸಿ ನಿಂತಳು

ಗುಡುಗಿನ ಆರ್ಭಟವಿಲ್ಲ, ಸಿಡಿಲಿನ ಸದ್ದಿಲ್ಲ
ಅವಳ ಮಿಂಚಿನ ನೋಟವೊಂದೆ ಕೋರೈಸುತ್ತಿತ್ತು
ನೀಳ ಕೇಶಕ್ಕೆ ಕಿರೀಟದಂತೆ ಮುಂಗುರುಳು ಸುರಳಿ ಸುತ್ತಿತ್ತು
ರವಿಯ ಕಿರಣ ಕೆನ್ನೆಯ ರಂಗ ಹೆಚ್ಚಿಸಿತ್ತು

ಕುಡಿನೋಟವ ಬೀರಿದೆ ಅವಳೆಡೆ
ಅವಳೆತ್ತಲೋ ನೋಡುತ್ತಿದ್ದಳು.

ಸ್ಪಂದಿಸದ ಸುಂದರ ನಯನೆಯ ಮನದಲಿ ಶಪಿಸುತ್ತಾ ನಡೆದೆ.
ಯಾರೋ ಬಿದ್ದ ಶಬ್ದ ಆಲಿಸಿ ತಿರುಗಿ ನೋಡಿದೆ
ಕುಸಿದು ಕೂತಿದ್ದಳು ಅವಳಲ್ಲಿ
ಕಲುಕಿತು ಮನ
ಶಪಿಸಿದೆ ಸೃಷ್ಟಿಕರ್ತನಾ
ಎಲ್ಲಾ ಕೊಟ್ಟು ಕಣ್ಣುಕಿತ್ತೆಯಲ್ಲೊ ಎಂದು ಬೈಯುತ್ತಾ...
ಸಾಗಿದೆ ಅವಳೆಡೆಗೆ
ಕಾಂತಿ ಇರದ ನಯನಗಳ ನೋಡುತ್ತ..

ಮತ್ತೆ ಬಿತ್ತು ಮಳೆ.. ಕನಸಿನೊಡನೆ

ಮಳೆಯಲ್ಲಿ ನೆಂದ ಮನಸು
ಮೂಡಿಸಿತು ಕನಸನು
ತುಂತುರು ಹನಿಗಳ ಮಳೆ
ಸವಿಗನಸಿನ ಮಾಲೆ ಹೆಣೆದಿತ್ತು
ಸ್ವಪ್ನದ ಹೊಳೆ ಹರಿಸಿ ನನ್ನ ತೇಲಿಸಿತ್ತು.
ನೆಂದರೂ ಮನ ನಡುಕವಿಲ್ಲ
ಲಹರಿಯಂತೆ ಕನಸ ಅಲೆಯಿದ್ದರೂ
ಸವಿನೆನಪ ದೋಣಿ ದಿಕ್ಕು ತಪ್ಪಿಲ್ಲ

ಬದಲಾಗದೆ ದಿಕ್ಕು ಮನಕೆ ಮೂಡಿತು ಬೇಸರ
ನೆತ್ತಿಯನ್ನು ಸುಡುತ್ತಿದ್ದ ಆಗ ನೇಸರ
ದೂರದಿ ಕಂಡ ನೆಲೆ ಮರೀಚಿಕೆಯಾಯ್ತು
ಕನಸ ಕಂಡ ಮನಸ್ಸು ಯಾನ ನಿಲ್ಲಿಸಿತು
ಆದರೆ ತುಂತುರು ಹನಿಗಳ ಮಳೆ
ನಿಲ್ಲದೆ ಸುರಿಯುತ್ತಿತ್ತು....