page1

Pages

Monday, December 31, 2007

ಹೊಸ ವರ್ಷದ ಬಂದಿದೆ ಮತ್ತೆ


ನಾಳೆ ಹೊಸವರ್ಷ ಕಣೇ, ಬೇಜಾನ್ ಪ್ರಿಪರೇಷನ್ ಮಾಡ್ಕೋಬೇಕು, ನೀನು ಬರ್ತೀಯಾ ತಾನೇ? ಹೀಗೆ ಒಂದು ಸಮನೆ ಸಾಗಿತ್ತು ಅವಳ ಲಹರಿ. ಹ್ಞು... ನೋಡೋಣ ಎಂದು ಫೋನಿಟ್ಟೆ. ನಂತರ ಯೋಚಿಸತೊಡಗಿದೆ ಏನಾಗಿದೆ ಇವಳಿಗೆ ಮೊದಲೆಲ್ಲಾ ಹೀಗಿರಲಿಲ್ಲ., ಸಿಟಿ ಗಾಳಿ ಸೋಕಿದ ಮೇಲೆ ಎಂಥಾಯ್ತೋ ಏನೋ ಕಾಣೆ.

ನಮ್ ಜನನೂ ವಿಚಿತ್ರ ಬಿಡಿ. ಹೊಸ ವರ್ಷ ಅಂಥಾ ಏಂತಿಕ್ಕೆ ಆಚರಿಸುತ್ತಾರೋ ಗೊತ್ತಿಲ್ಲ. ನಾಳೆ ಏನು ಋತು ಬದಲಾಗಲ್ಲ. ಚಳಿ ಕಮ್ಮಿಯಾಗಲ್ಲ, ಬಿಸಿಲು ತಂಪಾಗಲ್ಲ, ಕೋಗಿಲೆ ಏನೂ ಸಪ್ತಸ್ವರ ಹೊರಡಿಸೋಲ್ಲ, ಮನುಷ್ಯ ಅಂತೂ ಬದಲಾಗಲ್ಲ. (ಉದ್ದುದದ ಬದಲಾವಣೆ ಪಟ್ಟಿ ತಯಾರಿಸಿಟ್ಟಿಕೊಂಡರೂ) ಏನಿಲ್ಲ ಮತ್ತೆ ಯಾತರದ್ದು ಈ ಹೊಸ ವರ್ಷ ಬರೀದೆ ಕ್ಯಾಲೆಂಡರ್ ಅಂಕಿ ಬದಲಾಗೊದಕ್ಕೆ ಇಷ್ಟೊಂದು ಸಂಭ್ರಮನಾ, ಮೂರ್ಖತನದ ಪರಮಾವಧಿ ಅನಿಸಿತು ನಂಗೆ.

ಊರಲ್ಲಿ ಇದ್ದಿದ್ದರೆ ಈ ಪರಿ ಯೋಚನೆ ಬರೋ ಮಾತೇ ಇಲ್ಲ. ಯಾಕೆಂದರೆ ಅಲ್ಲಿ ಈ ಪರಿ ಹುಚ್ಚಾಪಟ್ಟೆ ಸಂಭ್ರಮದ ಹೊಸ ವರ್ಷವಂತೂ ಕಾಣೆ.

ನಾನು ಈ ಬ್ಲಾಗಿನ ಹೊಟ್ಟೆಗೆ ಅಕ್ಷರ ತುಂಬಿಸದೆ ಬಹುದಿನ ಉಪವಾಸ ಇಟ್ಟಿದ್ದೆ...ಪಾಪ. ಹೊಸ ವರ್ಷದ ಸಂಭ್ರಮದಲ್ಲಿ ಅದರ ಹೊಟ್ಟೆನು ಸ್ವಲ್ಪ ತುಂಬಲಿ ಅಂತ ಬರಿತ್ತಾ ಇದ್ದೀನಿ...

ವಸಂತ ಮಾಸದ ಕೋಗಿಲೆ ಗಾನವ ಮುದದಿ ಕೇಳುತ್ತಾ, ಚಿಗುರೆಲೆಯ ಹಸಿರು ತೋರಣ ಕಟ್ಟುತ್ತಾ, ಮನೆ ಮುಂದಣ ರಂಗೋಲಿಗೆ ಬಣ್ಣ ತುಂಬುತ್ತಾ,ಎಲ್ಲೆಡೆ ಹೊಸ ಬಗೆಯ ನೋಟವ ಕಾಣುತ್ತಾ ಆಚರಿಸುವ ಹಬ್ಬವೇ ಹೊಸ ಹಬ್ಬ ಎನ್ನುವುದು ಒಂದರ್ಥದಲ್ಲಿ ಸಮಂಜಸವೇ.

ಆದರೆ, ಯುಗದ ಆದಿ ಯುಗಾದಿ ಎಂದು ನಾವು ಯುಗಾದಿಯ ರೀತ್ಯ ಕಾಲ, ಮಾಸ ತಿಥಿಗಳನ್ನೆನ್ನೂ ಅನುಸರಿಸುತ್ತಿಲ್ಲವಲ್ಲ. ಹೆಚ್ಚಿನವರ ದಿನಚರಿ ನಡೆಯುವುದು ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷದ ದಿನ ಎಂದು ಕ್ಯಾಲೆಂಡರ್ ನಲ್ಲಿ ಹಾಕಿರುವಾಗ ನಾವು ಆಚರಿಸದಿದ್ದರೆ ಹೇಗೆ ಅಲ್ವಾ.ಆದರೆ ಆಚರಿಸುವ ಪರಿ ಹೇಗೆ? ನಂಗಂತೂ ಹೊಸದು, ನನ್ನ ಸ್ನೇಹಿತೆಗೆ ಕರೆ ಮಾಡಿದೆ.

ಅವಳು ಹೇಳಿದ್ದೆಲ್ಲಾ ಕೇಳಿದ ಮೇಲೆ ನನಗನಿಸಿದ್ದು, ಹೊಸ ವರ್ಷದ ಮೋಜು ಬರೀ ಕ್ಷಣಿಕ, ಆದರೆ ಅದರ ಸವಿ ಕೊನೆತನಕ. ಇಷ್ಟವಿದ್ದವರು ಅವರವರ ಶಕ್ತ್ಯಾನುಸಾರ ಆಚರಿಸಲಿ, ಮದ್ಯದ ಹೊಳೆ ಹರಿಸಿ ತೇಲಲಿ, ಮುಳುಗಲಿ, ಕಾಡಿನಲ್ಲಿ ಬೆಂಕಿ ಹಚ್ಚಿ ಕುಣಿಯಲಿ, ಬಟ್ಟೆ ಹರಿದುಕೊಂಡು ಕೇಕೇ ಹಾಕಲಿ, ಬೀಚಿನಲ್ಲಿ ಸುತ್ತಲಿ, ಕಂಬಳಿ ಹೊದ್ದು ಮಲಗಲಿ, ಲಿಂಗಬೇಧ ಮರೆತು ಕಲೆಯಲಿ, ಮೆರೆಯಲಿ, ಕೊರಗಲಿ, ಕೊಳತು ನಾರಲಿ, ಸಾಕಪ್ಪ ಸಾಕು ಈ ನಗರ ಜೀವಿಗಳ ವರ್ಷಾಚರಣೆಯ ಸಂಭ್ರಮ.

ಇದರ ಮಧ್ಯ ಕೆಲವು ದೇವಾನುದೇವತೆಗಳಿಗೆ ನೈಟ್ ಶಿಫ್ಟ್ ಬೇರೆ ಅಂತೆ. ವಿಶೇಷ ಪೂಜೆ, ಆರಾಧನೆ. ರಾಮ ರಾಮ. ಅವರವರ ಭಾವಕ್ಕೆ ಅವರವರ ಭಕುತಿಗೆ, ಏನಾದರೂ ಮಾಡಿಕೊಳ್ಳಿ.

ಹಬ್ಬ ಮಾಡೋದರಿಂದ ನಷ್ಟವೇನೂ ಇಲ್ಲ. ಆದರೆ ನಾಳೆ ದಿನ ಅದೇ ಕಷ್ಟ ಆಗಬಾರದು ಅಷ್ಟೆ. ಎಲ್ಲರಿಗೂ ತಿಳಿ ಹೇಳೋ ಯಜಮಾನತಿ ನಾನೇನಲ್ಲ. ಆದರೆ, ಪ್ರತಿ ನಿತ್ಯ ನಮಗಾಗಿ ಸಿಗುವ ಪ್ರತಿ ಕ್ಷಣವನ್ನು ಹೊಸತನಕ್ಕೆ ತಿರುಗಿಸೋಣ, ಹೊಸ ಅವಧಿಯನ್ನು ಹೊಸತನದಿಂದ ರೂಪಿಸಿ, ಪ್ರತಿ ದಿನವನ್ನು ಹೊಸ ದಿನ ಮಾಡೋಣ.

ನಾಳೆಯ ಚಿಂತೆ ಬಿಟ್ಟು, ಇಂದು ಜೀವಿಸೋಣ ಆನ್ನೊ ಪಾಲಿಸಿ ನಂದು. ಅರ್ಥವಿಲ್ಲದ ಆಚರಣೆಯಿಂದ ವ್ಯರ್ಥವಾಗುವ ಸಮಯದ ಸದುಪಯೋಗ ಮಾಡಿಕೊಳ್ಳೊದು ಒಳಿತು ಅನ್ನಿಸುತ್ತದೆ. ಎನಿವೇ,
೨೦೦೮ ನೇ ಹೊಸ ವರ್ಷದ ಶುಭಾಶಯಗಳು.

Friday, July 20, 2007

ನೆನಪು

ಮನದಂಗಳದ ನಿತ್ಯ ಸಂಚಾರಿ
ನೋವ ಮರೆಸುವ ಮನೋಹಾರಿ
ಅರಿಯದೆ ಹೋದೆ ನಾ ನಿನ್ನ ದಾರಿ.
ಮೂಡಿಸದೆ ನಿನ್ನ ಹೆಜ್ಜೆ ಗುರುತು ಅರಿವಿನ ಮಾರ್ಗ ತೋರಿದೆ.
ಕೈಗೆಟುಕದ ಮಾಯಾ ಜಿಂಕೆ
ಮಿಂಚಂತೆ ಸುಳಿದೆ ಮೋಡದಂತೆ ಮನ ಕರಗಿಸಿದೆ
ಸುಖದ ಮಳೆ ಸುರಿಸಿದೆ.
ಮಳೆಯ ಕೊನೆ ಹನಿ ಧರೆಯ ಸೇರೋ ಮೊದಲು ಮರೆಯಾದೆ.
ಎಲ್ಲಿ ಹೋದೆ ಏಕೆ ಹೋದೆ ಎತ್ತ ಹೋದೆ ತಿಳಿಯದಾದೆ.
ಬಿಡು ಮೊದಲು ನಿನ್ನ ಕಾಣಲಿಲ್ಲ
ಇಂದು ಕಾಣೋ ಮನಸಿಲ್ಲ.
ಮನದಮೂಲೆಯಲ್ಲಿ ಸುಪ್ತವಾಗಿ ಹರಿಯಲಿ ನಿನ್ನ ನೆನಪು ,
ನಿನ್ನೊಡನೆ ಕಳೆದ ಸವಿನೆನಪ ಹಿಂದುರುಗಿಸು ಮರೆಯದೆ

Sunday, May 27, 2007

ಛೇ!! ಹೀಗೇಕಾಯ್ತು

ಹೊಂಬೆಳಕ ಕಿರಣದಿ ಕಂಡಳು ಅವಳು
ಮುಂಜಾನೆಯಲ್ಲೂ ನಶೆ ಏರಿಸಿದಳು ನನ್ನೊಳು
ತುಂತುರು ಮಳೆಯ ಮನದಿ ತಂದಳು
ಹುದುಗಿದ್ದ ಆಸೆಗಳ ಚಿಗುರಿಸಿ ನಿಂತಳು

ಗುಡುಗಿನ ಆರ್ಭಟವಿಲ್ಲ, ಸಿಡಿಲಿನ ಸದ್ದಿಲ್ಲ
ಅವಳ ಮಿಂಚಿನ ನೋಟವೊಂದೆ ಕೋರೈಸುತ್ತಿತ್ತು
ನೀಳ ಕೇಶಕ್ಕೆ ಕಿರೀಟದಂತೆ ಮುಂಗುರುಳು ಸುರಳಿ ಸುತ್ತಿತ್ತು
ರವಿಯ ಕಿರಣ ಕೆನ್ನೆಯ ರಂಗ ಹೆಚ್ಚಿಸಿತ್ತು

ಕುಡಿನೋಟವ ಬೀರಿದೆ ಅವಳೆಡೆ
ಅವಳೆತ್ತಲೋ ನೋಡುತ್ತಿದ್ದಳು.

ಸ್ಪಂದಿಸದ ಸುಂದರ ನಯನೆಯ ಮನದಲಿ ಶಪಿಸುತ್ತಾ ನಡೆದೆ.
ಯಾರೋ ಬಿದ್ದ ಶಬ್ದ ಆಲಿಸಿ ತಿರುಗಿ ನೋಡಿದೆ
ಕುಸಿದು ಕೂತಿದ್ದಳು ಅವಳಲ್ಲಿ
ಕಲುಕಿತು ಮನ
ಶಪಿಸಿದೆ ಸೃಷ್ಟಿಕರ್ತನಾ
ಎಲ್ಲಾ ಕೊಟ್ಟು ಕಣ್ಣುಕಿತ್ತೆಯಲ್ಲೊ ಎಂದು ಬೈಯುತ್ತಾ...
ಸಾಗಿದೆ ಅವಳೆಡೆಗೆ
ಕಾಂತಿ ಇರದ ನಯನಗಳ ನೋಡುತ್ತ..

ಮತ್ತೆ ಬಿತ್ತು ಮಳೆ.. ಕನಸಿನೊಡನೆ

ಮಳೆಯಲ್ಲಿ ನೆಂದ ಮನಸು
ಮೂಡಿಸಿತು ಕನಸನು
ತುಂತುರು ಹನಿಗಳ ಮಳೆ
ಸವಿಗನಸಿನ ಮಾಲೆ ಹೆಣೆದಿತ್ತು
ಸ್ವಪ್ನದ ಹೊಳೆ ಹರಿಸಿ ನನ್ನ ತೇಲಿಸಿತ್ತು.
ನೆಂದರೂ ಮನ ನಡುಕವಿಲ್ಲ
ಲಹರಿಯಂತೆ ಕನಸ ಅಲೆಯಿದ್ದರೂ
ಸವಿನೆನಪ ದೋಣಿ ದಿಕ್ಕು ತಪ್ಪಿಲ್ಲ

ಬದಲಾಗದೆ ದಿಕ್ಕು ಮನಕೆ ಮೂಡಿತು ಬೇಸರ
ನೆತ್ತಿಯನ್ನು ಸುಡುತ್ತಿದ್ದ ಆಗ ನೇಸರ
ದೂರದಿ ಕಂಡ ನೆಲೆ ಮರೀಚಿಕೆಯಾಯ್ತು
ಕನಸ ಕಂಡ ಮನಸ್ಸು ಯಾನ ನಿಲ್ಲಿಸಿತು
ಆದರೆ ತುಂತುರು ಹನಿಗಳ ಮಳೆ
ನಿಲ್ಲದೆ ಸುರಿಯುತ್ತಿತ್ತು....

Monday, May 14, 2007

ಎಲ್ಲ ಭಾವಗಳು ತುಂಬಿ ವೈಖಾಖದ ಬಿಸಿ ತಂಪಾಯ್ತು!!!!

ಬೆಂಗಳೂರಿಗೆ ರಜೆ ಮೇಲೆ ಬಂದಿದ್ದ ನನಗೆ, ಸಂಗೀತದ ಕಾರ್ಯಕ್ರಮ ಅದರಲ್ಲೂ ಸಿ. ಅಶ್ವಥ್ ತಂಡದ ಕಾರ್ಯಕ್ರಮ ನೋಡೊಕೆ ಹೋಗುತ್ತಿದ್ದೀನಿ ಅನ್ನೋ ವಿಷ್ಯಾನೆ ಮನ ತಣಿಸಿತ್ತು. ಅಲ್ಲಿ ಹೋದ್ರೆ ಧನೀ ಜನ, ಹೇಗೋ ಟಿಕೆಟ್ ಪಡೆದು ಒಳಹೊಕ್ಕು ಕುಳಿತಿದ್ದಷ್ಟೇ ಗೊತ್ತು.. ಉಳಿದಿದ್ದೆಲ್ಲಾ ಗಂಧರ್ವ ಲೋಕದಲ್ಲಿ ತೇಲುತ್ತಿದ್ದ ಅನುಭವ. . .ಸುಂದರ ರಸಾನುಭೂತಿ...ಹಸಿರಿನ ಮಧ್ಯೆ ನಾನು ಪಡೆಯುತ್ತಿದ್ದ ಧನ್ಯತೆಯ ಭಾವ. . .ರಾಗಾಲಾಪಾನೆಯಿಂದ ಆಗಿತ್ತು.

ವೈಶಾಖ ಸಂಜೆ - ಭಾವನೆಗಳ ರಂಗವಲ್ಲಿಯನ್ನು ಚೆಲ್ಲುತ್ತಾ, ಕಾಮನಬಿಲ್ಲಿನ ಹಾಗೆ ಎಲ್ಲ ರಂಗನ್ನು ಮೂಡಿಸಿತು. ಬಹುದಿನಗಳ ನಂತರ ರವೀಂದ್ರ ಕಲಾಕ್ಷೇತ್ರ ಪ್ರೇಕ್ಷಕರ ಕರತಾಡನ, ಕೇಕೇ ಯಲ್ಲಿ ತುಂಬಿ ಹೋಗಿತ್ತು. ವೈಶಾಖದ ಬಿಸಿಲಿನ ತಾಪ ಕಮ್ಮಿ ಯಾಗುತ್ತಿದ್ದಂತೆ ಮೂಡಿದ ಭಾನುವಾರದ ಸಂಜೆಗೆ ಸಿ.ಅಶ್ವಥ್ ತಂಡದ ಗಾನದ ಇಂಪು ಸೇರಿ ತಂಪಾಗಿಸಿತು.

ಕಾರ್ಯಕ್ರಮದ ನಿರೂಪಣೆ ಮಾಡಿದ ಭಾಗವತರು ತಂಡದ ರೇವಣ್ಣಯವರು ನೆರಿದಿದ್ದ ಪ್ರೇಕ್ಷಕರತ್ತ ಕಣ್ಣು ಹಾಯಿಸಿ, ಒಮ್ಮೆ ಮೂಕವಿಸ್ಮಿತರಾದಂತೆ ನಿಂತಿದ್ದು ಕಾಣಿಸುತ್ತಿತ್ತು. ಭಾವಗೀತೆಗಳ ಕಾರ್ಯಕ್ರಮಕ್ಕೆ ಜನ ಬರೋದೇ ಕಮ್ಮಿ ಅಂಥದರಲ್ಲಿ ೫೦ , ೧೦೦ ರೂ ಟಿಕೆಟ್ ಇಟ್ಟರೆ ಜನ ಬರುತ್ತಾರ ಅಂತಾ ನನಗೆ ಹೋದೆಡೆಯಲ್ಲ ಪ್ರಶ್ನೆ ಹಾಕುತ್ತಿದ್ದರು. ಕನ್ನಡದ ಜನ ಒಳ್ಳೆಯದಕ್ಕೆ ಯಾವತ್ತು ಪ್ರೋತ್ಸಾಹ ನೀಡುತ್ತಾರೆ ಎನ್ನುವುದಕ್ಕೆ ನೀವುಗಳೇ ಸಾಕ್ಷಿ ಎಂದು ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.


ಹೆಚ್ಚು ಸಮಯ ಮಾತುಕತೆಯಲ್ಲಿ ಕಳೆಯದೆ, ಗಾಯಕ ಸಿ. ಅಶ್ವಥ್ ಹಾಗೂ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾದ ಜೀ ಕನ್ನಡ ವಾಹಿನಿಯ ಎಸ್‌ಎಲ್‌ಎಲ್ ಸ್ವಾಮಿಯವರಿಗೆ ಕನ್ನಡ ಪ್ರಭ ಸಂಪಾದಕ ಎಚ್. ಆರ್. ರಂಗನಾಥ್ ಅವರಿಂದ ಸನ್ಮಾನ ಮಾಡಿಸಿ ಗೌರವಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಗೀತೆಯನ್ನು ಹೊಸ ಬಗೆಯ ಸಂಯೋಜನೆಯನ್ನು ಹಾಡಿ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗಿ ನಾಂದಿ ಹಾಡಿದ ಸಿ. ಅಶ್ವಥ್ ಅವರಿಗೆ ಎಂ.ಡಿ. ಪಲ್ಲವಿ ಅರುಣ್, ಸುಪ್ರಿಯಾ ಆಚಾರ್ಯ ಹಾಗೂ ರವಿ ಮುರೂರು ಗಾಯನದ ಸಾಥ್ ನೀಡಿದರು.
ನಂತರ ಒಂದೊಂದಾಗಿ ಆರಂಭದ ಗಾನ ಪಂಕ್ತಿಯಲ್ಲಿ ಬೇಂದ್ರೆ, ಕುವೆಂಪು, ಬಿ.ಆರ್ .ಲಕ್ಷಣ್‌ರಾವ್, ದೇಸ್ ಕುಲಕರ್ಣಿ, ಕೆ. ಎಸ್ . ನರಸಿಂಹಸ್ವಾಮಿ ಅಲ್ಲದೆ ಶಿಶುನಾಳ ಷರೀಫರ ತತ್ವಪದಗಳೂ ಸೇರಿ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಹೆಚ್ಚಾಗಿ ಮೈಸೂರು ಅನಂತಸ್ವಾಮಿ ಹಾಗೂ ಸಿ.ಅಶ್ವಥ್ ಅವರ ರಾಗ ಸಂಯೋಜನೆಯಲ್ಲಿದ್ದ ಗೀತೆಗಳು ಕೇಳುಗರ ಹೃದಯ ತಣಿಸಿದವು. ಪ್ರೇಮ, ಹುಡುಗಾಟ, ವೇದನೆ, ಉಲ್ಲಾಸ, ದೇಶಭಕ್ತಿ, ವಿರಹ ಹೀಗೆ ನಾನಾ ಬಗೆಯ ರಸಗಳು ಒಮ್ಮೆಗೆ ಮೆಳೈಸಿ ಗಾನಸುಧೆಯನ್ನು ಹರಿಸಿದರು. ಗಾಯನಕ್ಕೆ ತಕ್ಕಂಥ ವಾದ್ಯವೃಂದ ಕೆಲಬಾರಿ ಗಾಯನದ ಜೊತೆ ಪೈಪೋಟಿಗೆ ಇಳಿದಂತೆ ಗಾಯಕ/ಕಿಯರನ್ನೆ ಮೋಡಿ ಮಾಡಿತು ಎಂದರೆ ತಪ್ಪಾಗಲಾರದು.


ಸಿ. ಅಶ್ವಥ್ ತಂಡ ಹಾಡುವ ಎಂದಿನ ಭಾವಗೀತೆಗಳ ಜತೆಗೆ ಕೆಲವು ಹೊಸ ಗೀತೆಗಳನ್ನು ಹಾಡಿದ್ದು ವಿಶೇಷವಾಗಿತ್ತು. ಉಳಿದಂತೆ ಅಶ್ವಥ್ ತಂಡದ ಪ್ರಮುಖ ಗೀತೆಗಳಾದ ಎದೆ ತುಂಬಿ ಹಾಡಿದೆನು. ., ಶ್ರಾವಣ ಬಂತು ನಾಡಿಗೆ. .. , ಬಂಗಾರ ನೀರ ಕಡಲಾಚೆಗೀಚೆ..,ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು. . . ನಿನ್ನ ಪ್ರೇಮದ ಪರಿಯ. . .ನಿನ್ನೊಲುಮೆಯಿಂದಲೇ ಬಾಳು. . ., ಸಿರಿಗೆರೆಯ ನೀರಿನಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ. . ನಿನ್ನ ಹೆಸರು. . .ನೀ ಹೀಂಗ ನೋಡಬ್ಯಾಡ ನನ್ನ, ನೂರು ದೇವರನೆಲ್ಲ ನೂಕಾಚೆ ದೂರ, ಅಂದಿನಿಂದಲೂ ರಂಜಿಸುತ್ತ ಬಂದಿದೆ.

ಭಾನುವಾರದ ಸಂಜೆ ಕೂಡ ರಂಜಿಸಿತು. ಎಂ. ಡಿ. ಪಲ್ಲವಿ ಕಂಠದಲ್ಲಿ ಮೂಡಿಬಂದ ಎದೆ ತುಂಬಿ ಹಾಡಿದೆನು, ದೀಪವು ನಿನ್ನದೇ ಗಾಳಿಯು ನಿನ್ನದೇ, ಹಾಗೂ ಸುಪ್ರಿಯಾ ಆಚಾರ್ಯ ಹಾಡಿದ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ, ಅಮ್ಮ ನಿನ್ನ ಎದೆಯಾಳದಲ್ಲಿ ಗೀತೆಗಳು ಬಹು ಮೆಚ್ಚುಗೆಗೆ ಪಾತ್ರವಾಯಿತು. ರವಿ ಮುರೂರು ತಮ್ಮ ಪಾಲಿಗೆ ಸಿಕ್ಕ ` ಮರೆಯಲಾರೆ ನಿನ್ನ . . . . ' ಎಂಬ ಒಂದು ಹಾಡಿನಿಂದಲೇ ಅಶ್ವಥ್ ಹಾಗೂ ಕೇಳುಗರ ಮನಸೂರೆಮಾಡಿದರು.

"ಬದುಕು ಮಾಯೆಯ ಮಾಟ", "ಆವು ಈವಿನಾ""ಮುಚ್ಚುಮರೆಯಿಲ್ಲದೆಯೆ"
ಸಿ. ಅಶ್ವಥ್ ಕಂಠ ಯಾಕೋ ಸ್ವಲ್ಪ ಡಲ್ ಆಗಿದೆ ಇವತ್ತು ಎನ್ನುವಷ್ಟರಲ್ಲೆ ಷರೀಫರ ಪದಗಳು ಅಶ್ವಥ್ ಅವರ ದನಿಯಿಂದ ಒಂದೊಂದಾಗಿ ನುಗ್ಗಿ ಎಲ್ಲೆಡೆ ಹರಡಿ, ವಿಜೃಂಭಿಸಿ, ಜನರನ್ನು ಕುಣಿಯುವಂತೆ ಮಾಡಿತು. ಸುಮಾರು ೩ ತಾಸಿನ ಅವ ಮುಗಿದಿದ್ದೆ ಜನರಿಗೆ ತಿಳಿಯಲಿಲ್ಲ.

ಗಾಯನ ಮುಗಿದ ಮೇಲೆ ಸಿ. ಅಶ್ವಥ್ ಅವರು ಕನ್ನಡವೇ ಸತ್ಯ ಕಾರ್ಯಕ್ರಮವನ್ನು ನೆನೆದು, ಟಿಕೆಟ್ ಇಟ್ರೆ ಜನ ಬರುತ್ತಾರಾ ಎಂಬ ಸಂಶಯ ನನ್ನಲ್ಲೂ ಇತ್ತು. ಆದರೆ ಕನ್ನಡಿಗರು ಎಂದೂ ಕಲಾವಿದರನ್ನು ಕೈ ಬಿಟ್ಟಿಲ್ಲ. ಬಿಡೋದಿಲ್ಲ ಎನ್ನೋದನ್ನು ಇವತ್ತು ನೀವೆಲ್ಲ ಸಾಬೀತು ಮಾಡಿದ್ದೀರಿ ನಿಮಗೆ ಧನ್ಯವಾದಗಳು ಎಂದು ಪ್ರೇಕ್ಷಕರತ್ತ ಕೈ ಬೀಸಿದರು. ಕಾರ್ಯಕ್ರಮಕ್ಕೆ ಉತ್ತಮ ಸಂಗೀತ ಹಿಮ್ಮೇಳ ನೀಡಿದ ಪ್ರಸಾದ್, ಜೆರಾಲ್ಡ್, ಕೃಷ್ಣ ಉಡುಪ, ಮಹೇಶ್, ಉಮೇಶ್ ತಂಡದವರನ್ನು ಹೊಗಳಿದರು.

ಕಡೆಗೆ, ಎಂ. ಡಿ. ಪಲ್ಲವಿ ಹಾಗೂ ಸುಪ್ರಿಯಾ ಆಚಾರ್ಯ ಅವರತ್ತ ತಿರುಗಿ, ಈ ಇಬ್ಬರು ಹೆಣ್ಮಕ್ಕಳು ತುಂಬಾ ಅದ್ಭುತ ಗಾಯಕಿಯರು, ಇವತ್ತಿನ ಕಾರ್ಯಕ್ರಮದ ಯಶಸ್ಸಿಗೆ ಇವರೇ ಕಾರಣ ಎಂದು ಹೇಳಿದಾಗ, ಪ್ರೇಕ್ಷಕರ ಕರತಾಡನದ ಸದ್ದು ಮುಗಿಲು ಮುಟ್ಟಿತ್ತು.

ಒಟ್ಟಿನಲ್ಲಿ ಬೇಸಿಗೆಯ ಬಿಸಿಲಿಗೆ ಬೇಸತ್ತಿದ್ದ ಬೆಂಗಳೂರಿಗರಿಗೆ ಸಿ. ಅಶ್ವಥ್ ತಂಡದವರು ಗಾನಸುಧೆಯನ್ನು ಉಣಬಡಿಸಿ ತಂಪು ನೀಡಿದರು ಅಂದರೆ ಅದು ಅತಿಶಯೋಕ್ತಿ ಆಗಲಾರದು. ಪಲ್ಲವಿ ಅಕ್ಕನನ್ನು ಒಮ್ಮೆ ಕಾಣುವ ಆಸೆ ಏನೊ ಇತ್ತು, ಆದರೆ ಊರಿಗೆ ಅಂದೇ ಹೊರಡುವ ಆತುರ.... ಹೊರಟು ಬಿಟ್ಟೆ..ಅವಳು ಹಾಡನ್ನು ಗುನುಗುತ್ತಾ... ನಮ್ ಊರಿಗೂ ಬರಲಿ ಇವರ ಮೇಳದ ದಿಬ್ಬಣ ಎಂದುಕೊಳ್ಳುತ್ತ ನಡೆದೆ.