
ರಾಜು ಸಾವಿನ ಸುದ್ದಿ ಸುಳ್ಳಾಗಲಿ ಎಂದು ತಾಯಿ ಶಾರದೆಯ ಫೋಟೊ ನೋಡುತ್ತಾ ಬಹುಶಃ ಶನಿವಾರ ನಾನು ಕರೆ ಮಾಡಿದಾಗ ಎಲ್ಲರ ಬಾಯಲ್ಲೂ ಬರುತ್ತಿದ್ದದ್ದು ಒಂದೇ ವಾಕ್ಯ. "ಛೇ ಸಾವು ಬರಬಾರದಿತ್ತು. ಇದು ಸಾಯುವ ವಯಸ್ಸಲ್ಲ". ಬೆಂಗಳೂರಿನ ಮಿತ್ರರು ರಾಜು ಸಾವಿನ ಬಗ್ಗೆ ಹೇಳುತ್ತಿದ್ದರೆ, ಇತ್ತ ಕಣ್ಣಾಲಿಗಳು ತುಂಬಿ ಬಂದಿತ್ತು.
ರಾಜು ಅನಂತ ಸ್ವಾಮಿ s/o ಮೈಸೂರು ಅನಂತಸ್ವಾಮಿ(ದೊರೈ) ನನ್ನ ಗೆಳೆಯನಲ್ಲ, ಬಂಧುವಲ್ಲ, ನೆಂಟನಲ್ಲ, ಕನಿಷ್ಠ ಆತನನ್ನು ನೋಡಿರುವುದು ಒಂದೆರಡು ಬಾರಿ ಅಷ್ಟೇ. ಆದರೆ ಅವನ ಹಾಡಂತೆ 'ನೀ ನನ್ ಹಟ್ಟಿಗೆ ಬೆಳಕಾಗಿದ್ದೆ ರಾಜು. . .' ನಿತ್ಯ ತಂದೆ ಮಕ್ಕಳ ಗಾನಸುಧೆ ತುಂಗೆಯಂತೆ ನಮ್ಮ ಮನೆ ಮನದಲ್ಲಿ ಹರಿಯುತ್ತಿತ್ತು. ಆತನ ಕಂಠಸಿರಿ ಆತನನ್ನು ನನ್ನ ಆಪ್ತೇಷ್ಟರ ಸಾಲಿಗೆ ಸೇರಿಸಿತ್ತು. ಅದೆಷ್ಟೋ ಬಾರಿ ಮನನೊಂದಾಗ ರಾಜು ದನಿ ಕೇಳಿ ಸ್ವಯಂ ಸಾಂತ್ವನ ಹೇಳಿಕೊಂಡಿದ್ದು ಇದೆ.
ರಾಜು ಸಾವಿಗೆ ಕುಡಿತ ಒಂದು ಕಾರಣ ಅಷ್ಟೇ. ಆದರೆ ಇದು ಸ್ವಯಂಕೃತವೋ, ಸಹವಾಸ ದೋಷವೊ, ದುರ್ವಿಧಿಯೋ ಒಟ್ಟಿನಲ್ಲಿ ಆತನ ಸಾವು ಇಡೀ ಸಂಗೀತ ಲೋಕದ ದುರಂತಗಳಲ್ಲಿ ಒಂದು. ನನ್ನಂತಹ ಸಾಧಾರಣ ಅಭಿಮಾನಿಗಳಿಂದ ಹಿಡಿದು, ಆತನಿಂದ ಸಂಗೀತದ ಓನಾಮ ಕಲಿತ ಎಲ್ಲರ ಪಾಲಿಗೆ ಗುರುವಾಗಿ, ಹಸನ್ಮುಖಿ ಗೆಳೆಯನಾಗಿ ರಾಜು ಸದಾ ಸ್ಮರಣೀಯ.
ಇಂದಿಗೂ ನಮ್ಮಡೆಯಲ್ಲಿ ಅತ್ರಿ ಸಾವಿನ ಸೂತಕ ಕಳೆದಿಲ್ಲ. ಆಗಲೇ ರಾಜು ಅಗಲಿಕೆ ಆಘಾತಕಾರಿಯಾಗಿದೆ. ಅದರಲ್ಲೂ ರಾಜು ಅವರ ತಾಯಿ, ಅಜ್ಜಿ ಈ ಆಘಾತವನ್ನು ಹೇಗೆ ಸಹಿಸುತ್ತಿದ್ದಾರೆ ಎಂದು ನೆನೆದರೆ ದೇವರ ಮೇಲೆ ಮುನಿಸಾಗುತ್ತದೆ.
ರಾಜು ಬೆಳೆಸಿದ ಶಿಷ್ಯಂದಿರಲ್ಲಿ ಆತನ ಪ್ರತಿಭೆಯನ್ನು ಕಾಣುವ ಪ್ರಯತ್ನ ಪಡಬಹುದಾದರೂ, ಅನಂತಸ್ವಾಮಿ, ರಾಜು ಪರಂಪರೆ ಪೂರ್ಣವಾಗಿ ಇತಿಹಾಸದ ಪುಟ ಸೇರಲಿದೆ ಎಂಬ ಅರಗದ ಸತ್ಯ ಸದಾ ಕಾಡುತ್ತಿರುತ್ತದೆ. ಸಾವೇ ನೀನೇಷ್ಟು ಘೋರ...ನಿನಗಿದೋ ನನ್ನ ಧಿಕ್ಕಾರ...
No comments:
Post a Comment