page1

Pages

Sunday, March 31, 2013

ಮಳೆ ಮೇಲೆ ಮುನಿಸು












ವಾರದಿಂದ ಕಾದಿದ್ದೆ ಬಂತು ಗುಡುಗು ಇಲ್ಲ... ಗಾಳಿಯೂ... ನಾವಿರೋದು ಮಲೆನಾಡೋ ಬಯಲು ಸೀಮೆಯೋ ಎಂಬ ಶಂಕೆ ಬಂದು ಬಿಟ್ಟಿತ್ತು.

ವಾರಾಂತ್ಯದಲ್ಲಿ ಮೋಜಿನಲ್ಲಿ ವ್ಯಸ್ತನಾಗಿದ್ದ ನನ್ನ ತಮ್ಮ ಕಿಟ್ಟಿ ಕರೆ ಮಾಡಿ ಬೆಂಗಳೂರಿನಲ್ಲಿ 'ಮಸ್ತ್ ಮಳೆ ಸುರೀತಿದೆ ಕಣೆ..ಬಸ್ ಹತ್ತಿ ಬಂದು ಬಿಡು ಬೆಳಗ್ಗೆ ಒಳಗೆ ನಿಂಗೂ ಸಿಗಬಹುದು ಲಕ್ ಇದ್ರೆ' ಎಂದು ಹೇಳಿ ಫೋನ್ ಕುಕ್ಕಿದ.. ಇಲ್ಲ ನಾನೇ ಫೋನ್ ಕುಕ್ಕಿದೆ


ತಕ್ಷಣವೇ ಮನೆ ಹೊರಗೆ ಬಂದು ಹುಣ್ಣಿಮೆ ಮುಗಿಸಿದ ಚಂದಿರ ಹುಡುಕತೊಡಗಿದೆ. ತಾರೆಗಳು, ಮೋಡ ಘರ್ಜನೆ,ವಾಯುದೇವನ ಆಹ್ಲಾದಕರ ಆಹ್ವಾನ ಹೂಂ ಏನು ಇಲ್ಲ....

ಅಲ್ಲೇ ಚಿಟ್ಟೆ ಮೇಲೆ ಕುಂತಿದ್ದ ಅಣ್ಣ 'ನನ್ನ ಬಾಧೆ  ಕಂಡು ಒಳಗೊಳಗೆ ನಗುತ್ತಾ ಎಂಥಾಯ್ತೆ ಪುಟ್ಟಿ ಯಾರ ಮೇಲೆ ಮುನಿಸು' ಎಂದರು.

ಅವರಿಗೂ ಗೊತ್ತು ಆ ಸಮಯಕ್ಕೆ ನನ್ನ ಮುನಿಸು ಮಳೆ ಮೇಲೆ ಇತ್ತು ಎಂದು. ಅವರ ಕಡೆಗೆ ಒಮ್ಮೆ ನೋಡಿ ಒಳಗೆ ನಡೆದೆ. ಮಲೆನಾಡಿಗೆ ಬರದೆ ಬೆಂಗಳೂರಿನ ಜನಕ್ಕೆ ತಂಪು ನೀಡಲು ಹೋಗಿರುವ ಮಳೆರಾಯನ ಮೇಲೆ ಸಿಟ್ಟಾಗದೆ ಇರಲು ಸಾಧ್ಯವೇ?

ಈ ಬಾರಿ ಬೇಸಿಗೆಯಲ್ಲಿ ಊಟದ ಮನೆಗಳು ಇದ್ದದ್ದೇ ಕಮ್ಮಿ. ನಮ್ಮ ಪೈಕಿ ಎಲ್ಲಾ ಊರು ಬಿಟ್ಟು ಬೆಂಗಳೂರು ಸೇರಿದ್ದರೋ ಏನೋ ಇಲ್ಲಿ ಉಳಿದಿರುವುದು ನಾವೇ ಒಂದು ನಾಲ್ಕು ಮನೆಯವರು ಅನ್ಸೋಕೆ ಶುರುವಾಗಿದ್ದು...

ಈ ಕಾಟದ ಜೊತೆಗೆ  ಮಳೆರಾಯ ಕೂಡಾ  ನಮ್ಮ ಕಡೆ ತಲೆ ಹಾಕಿ ಮಲಗಿಲ್ಲದಿರುವುದು ನನ್ನ ಬೇಸರ ಇನ್ನಷ್ಟು ಹೆಚ್ಚಿಸಿತ್ತು. ಮಳೆಯಂತೆ ನನ್ನನ್ನು ಕಾಡುವ ಇನ್ನೊಂದು ವಿಷ್ಯ ಇದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ, ಸದಾ ಬಯಸುವ ಅತಿಥಿ ಬಾರದ ಸಮಯಕ್ಕೂ ಸರಿ.. ನಿರೀಕ್ಷಿತ ಸಮಯಕ್ಕಾದರೂ ಸರಿ ಬರದಿದ್ದರೆ ಸಿಟ್ಟು ಬಾರದೆ ಇರುತ್ತದೆಯೇ?


ಸದಾ ಕಾಡುವ ಅತಿಥಿ ನೀ ಬರದಿದ್ದರೆ ನಮಗೇನು ಗತಿ
ನಮ್ಮ ಪರಿಸ್ಥಿತಿ ಮೇಲೆ ನಿನಗೆ ಮುನಿಸೋ, ನಗೆಯೋ
ನಮಗಂತೂ ನಿನ್ನ ಕಾಣದೆ ವರ್ಷವಾದಂಥ ಅನುಭವ

ಒಪ್ಪಿಕೊಂಡಿರುವೆ ನನ್ನ ಪರಾಭವ ಆಲಂಗಿಸು ಬಾ
ನನ್ನ ಜನುಮದ ಗೆಳೆಯನೇ ನಿನ್ನ ಒಡಲಾಳದ
ಆರ್ದ್ರತೆಯಿಂದ ತೋಯಿಸು ನನ್ನ ಮನದ ದುಗುಡವ
ಮಣ್ಣ ಮಕ್ಕಳ ಕಾಯುವ ಸಖ ನೀನಿಲ್ಲದೆ ನಮಗೆಲ್ಲಿ ನೆಲೆ

ದೂರದ ಊರಿಗೆ ನೀ ಹೋಗಿರುವುದು ಚುಟುಕು ಪ್ರಯಾಣ
ಎಂದೇ ನಾ ಭಾವಿಸಿರುವೆ, ನಿರೀಕ್ಷೆಯ ಹುಸಿ ಮಾಡಬೇಡ
ಮುಂದಿನ ಹುಣ್ಣಿಮೆಯ ಮೊದಲು ಮನೆಯ ಹಿಂದಿನ ಹೊಂಡ
ತುಂಬಿಸು ಮತ್ತೊಮ್ಮೆ ಅಲ್ಲಿ ನಿನ್ನ ನೆನದು ಹೋಕುಳಿ ಆಡುವೆ

ನಿನ್ನ ಸ್ವಾಗತಿಸಲು ಭಜಂತ್ರಿ ಹಿಡಿದು ನಾನೇ ಮುಂದೆ ನಿಲ್ಲುವೆ
ನೀ ಸಮಯಕ್ಕೆ ಸರಿಯಾಗಿ ಕಾಣಿಸದಿದ್ದರೆ ಮನೆಯ ಮುಂದಿನ
ತುಂಗೆಯ ಒಡಲಲ್ಲಿ ಮಲಗಿ ಎಂದಿನಂತೆ ನಿನ್ನ ನೆನದು ಸುರಿಸುವೆ
ನಾಲ್ಕು ಹನಿ ಮತ್ತೊಮ್ಮೆ ನೀ ಬರುವ ಹಾದಿಯ ಕಾಣುತ್ತಾ...